Advertisement

ಬೀದರನಲ್ಲಿ ದೂರವಾಗಿಲ್ಲ ಆತಂಕ

11:49 AM May 17, 2020 | Naveen |

ಬೀದರ: ಕಳೆದ ಐದು ದಿನಗಳಿಂದ ರಣಕೇಕೆ ಹಾಕುತ್ತ ಜಿಲ್ಲೆಯಲ್ಲಿ ತಲ್ಲಣ ಮೂಡಿಸುತ್ತಿರುವ ಕೋವಿಡ್ ವೈರಸ್‌ ಶನಿವಾರ ತನ್ನ ಆರ್ಭಟ ತಗ್ಗಿಸಿದ್ದರಿಂದ ಜನರಲ್ಲಿ ನಿರಾಳತೆ ಮೂಡಿದೆ. ಆದರೆ, ಜಿಲ್ಲೆಗೆ ಕಂಟವಾಗಿರುವ ತಬ್ಲೀಘಿ ಮತ್ತು ಮುಂಬೈ ನಂಟು ಬರುವ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಹಿನ್ನೆಲೆ ಆತಂಕ ಮಾತ್ರ ದೂರವಾಗಿಲ್ಲ.

Advertisement

ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ ಮಹಾಮಾರಿ ಕೋವಿಡ್ ಎರಡನೇ ವ್ಯಕ್ತಿಯನ್ನೇ ಬಲಿ ಪಡೆದಿದ್ದಲ್ಲದ್ದೇ 32 ಜನರಿಗೆ ಒಕ್ಕರಿಸಿ ಭೀತಿ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಸೋಮವಾರದಿಂದ ಸತತ ಕಾಡುತ್ತ ಬಂದಿರುವ ರಣ ರಕ್ಕಸ ವೈರಾಣು ಶನಿವಾರ ಕೊಂಚ ಬಿಡುವು ನೀಡಿದೆ. ಒಂದೂ ಪ್ರಕರಣಗಳು ದಾಖಲಾಗದೇ ಇರುವುದು ನಿಟ್ಟಿಸಿರು ಬಿಡುವಂತಾಗಿದೆ. ಆದರೆ, ಕೇವಲ ಬೀದರದ ಒಂದು ಭಾಗಕ್ಕಷ್ಟೇ ಸೀಮಿತವಾಗಿದ್ದ ಕೋವಿಡ್ ಸೋಂಕು ಈಗ ಜಿಲ್ಲೆಯ ಹಳ್ಳಿಗಳಿಗೂ ವ್ಯಾಪಿಸಿರುವುದು ದೊಡ್ಡ ಆಘಾತವನ್ನುಂಟು ಮಾಡಿದೆ. ನಗರದ ಓಲ್ಡ್‌ ಸಿಟಿಗೆ ತಬ್ಲೀಘಿಗಳ ನಂಟು ತಲ್ಲಣ ಮೂಡಿಸುತ್ತಿದ್ದರೆ, ಹಳ್ಳಿಗಳಿಗೆ ಮುಂಬೈ ಮತ್ತು ಹೈದ್ರಾಬಾದ್‌ ನಂಟು ಕಂಟಕವಾಗುತ್ತಿದೆ. ಜಿಲ್ಲೆಯ ಹುಣಸಗೇರಾ, ಧನ್ನೂರ(ಕೆ) ಗ್ರಾಮಕ್ಕೆ ಮುಂಬೈನಿಂದಬಂದಿರುವ ವಲಸೆ ಕಾರ್ಮಿಕರು ಮತ್ತು ಚಿಟಗುಪ್ಪಗೆ ಹೈದ್ರಾಬಾದ್‌ನಿಂದ ಬಂದಿರುವ ಮೃತ ವ್ಯಕ್ತಿಯಲ್ಲಿ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆ ಗ್ರಾಮಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಆದರೂ ಈ ನಂಜು ಸೋಂಕಿತರ ಸಂಖ್ಯೆ ಹೆಚ್ಚಿಸುವ ಸಾಧ್ಯತೆ ದಟ್ಟವಾಗುತ್ತಿದೆ.

ಬೀದರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಏ. 2ಕ್ಕೆ ಒಂದೇ ದಿನ 10 ಜನರಲ್ಲಿ ಸೋಂಕು ಕಾಣಿಸಿಕೊಂಡು ಗಮನ ಸೆಳೆದಿತ್ತು. ನಂತರ ಏ. 11ಕ್ಕೆ ಒಂದು, ಏ. 13ಕ್ಕೆ ಎರಡು, ಏ. 17ಕ್ಕೆ ಒಂದು, ಏ. 20ಕ್ಕೆ ಒಂದು, ಮೇ 2ಕ್ಕೆ ವೃದ್ಧನ ಸಾವು, ಮೇ 4ಕ್ಕೆ ಏಳು, ಮೇ 9ಕ್ಕೆ ಮೂರು ಮತ್ತು ಮೇ 11ಕ್ಕೆ ಎರಡು, ಏ. 12ಕ್ಕೆ ಎರಡು, ಏ. 13ಕ್ಕೆ ಹನ್ನೆರಡು ಮತ್ತು ಏ. 14ಕ್ಕೆ ಏಳು ಕೇಸ್‌ ಪತ್ತೆಯಾಗಿದ್ದರೆ, ಶುಕ್ರವಾರ ಏಳು ಪಾಸಿಟಿವ್‌ ವರದಿಯಾಗಿವೆ.ಜಿಲ್ಲೆಯಲ್ಲಿ ಈಗ ಒಟ್ಟಾರೆ 56 ಪಾಸಿಟಿವ್‌ ಪ್ರಕರಣಗಳು ವರದಿ ಆದಂತಾಗಿದೆ. ಅದರಲ್ಲಿ ಎರಡು ಸಾವು ಸಂಭವಿಸಿದ್ದರೆ 15 ಜನರು ಡಿಸಾcರ್ಜ್‌ ಆಗಿದ್ದು, ಇನ್ನೂ 39 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

795 ಜನರ ವರದಿ ಬಾಕಿ
ಬೀದರ ಜಿಲ್ಲೆಯಲ್ಲಿ ಇನ್ನೂ 795 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಒಟ್ಟು 8078 ಜನರ ಸ್ಯಾಂಪಲ್‌ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 7228 ಮಂದಿಯದ್ದು ನೆಗೆಟಿವ್‌ ಬಂದಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 56 ಪ್ರಕರಣಗಳು ವರದಿಯಾಗಿದ್ದು, ಎರಡು ಸಾವು ಸಂಭವಿಸಿದರೆ, 15 ಜನರು ಡಿಸಾcರ್ಜ್‌ ಆದಂತಾಗಿದೆ. ಇನ್ನೂ 39 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಶಂಕಿತ 223 ಜನರು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ 163 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next