Advertisement

Ayodhya: ಅಯೋಧ್ಯೆ ಬಾಲರಾಮ ಮೂರ್ತಿ ರಚನೆಗೆ ಇಡಗುಂಜಿ ಗಣೇಶ ಭಟ್ಟ

12:00 AM Dec 02, 2023 | Team Udayavani |

ಹೊನ್ನಾವರ: ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಬಾಲ ಶ್ರೀರಾಮಚಂದ್ರನ ಮೂರ್ತಿ ರಚನೆಗೆ ಆಮಂತ್ರಿತ ಮೂವರು ಶಿಲ್ಪಿಗಳಲ್ಲಿ ಇಲ್ಲಿನ ಇಡಗುಂಜಿ ಮಹಾಗಣಪತಿ ದೇವಸ್ಥಾನದ ಅರ್ಚಕರ ಪುತ್ರ ಗಣೇಶ ಭಟ್ಟರು ಒಬ್ಬರು. ಇನ್ನೊಬ್ಬರು ಕರ್ನಾಟಕದವರೇ ಆದ ಮೈಸೂರು ಮೂಲದ ಅರುಣರಾಜ್‌.

Advertisement

ರಾಮ ಮಂದಿರ ಉದ್ಘಾಟನೆ ಮತ್ತು ಪ್ರತಿಷ್ಠೆಯ ದಿನಾಂಕ ನಿಗದಿ ಆಗಿರುವುದರಿಂದ ಶಿಲೆಯಲ್ಲಿ ಸೂಕ್ಷ್ಮ ಕೆತ್ತನೆಯೊಂದಿಗೆ ಮೂರ್ತಿ ನಿರ್ಮಾಣ ಆಗುವುದರಿಂದ ಕೊನೆಯ ಕ್ಷಣದಲ್ಲಿ ಯಾವುದೇ ನೈಸರ್ಗಿಕ ಅವಘಡ ಆಗಬಾರದೆಂದು ಮೂರು ಶಿಲ್ಪಿಗಳನ್ನು ಅಯೋಧ್ಯೆಯಲ್ಲಿ ಕರೆಸಿ ಅಲ್ಲಿಯೇ ಮೂರ್ತಿ ನಿರ್ಮಾಣ ಕಾರ್ಯ ಸಾಗಿದ್ದು, ಗಣೇಶ ಭಟ್ಟ ಅಲ್ಲಿಯೇ ಮೂರ್ತಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಯಾವ ಮೂರ್ತಿ ಆಯ್ಕೆಯಾದರೂ ಉಳಿದೆರಡು ಮೂರ್ತಿಗಳು ಅದೇ ಕಟ್ಟಡದಲ್ಲಿ ಸ್ಥಾಪನೆಯಾಗಲಿದೆ.

ಇಡಗುಂಜಿ ಮಹಾಗಣಪತಿ ದೇವಸ್ಥಾನದ ಮುಖ್ಯ ಅರ್ಚಕ ಲಕ್ಷ್ಮೀನಾರಾಯಣ ಭಟ್ಟ ಮತ್ತು ಮಹಾಂಕಾಳಿ ದಂಪತಿಯ ದ್ವಿತೀಯ ಪುತ್ರ ಗಣೇಶ ಸಂಪ್ರದಾಯದಂತೆ ಬಾಲ್ಯದಲ್ಲೇ ಶಾಸ್ತ್ರಾಧ್ಯಯನ ಮಾಡುತ್ತ ಶಾಲೆ ಓದಿದವರು. ಎಸೆಸೆಲ್ಸಿ ಮುಗಿದ ಮೇಲೆ ಶಿಲ್ಪಶಾಸ್ತ್ರದಲ್ಲಿ ವಿಶೇಷ ಅಧ್ಯಯನ ಮಾಡಿ ಶ್ರೀಗಂಧದ ಮೂರ್ತಿಗಳನ್ನು ನಿರ್ಮಿಸುತ್ತ ಶಿಲಾ ಮೂರ್ತಿಗಳತ್ತ ವಾಲಿದವರು. ಇವರು ರಚಿಸಿದ ಶಿಲ್ಪಗಳು ಜೀವಕಳೆ ತುಂಬಿಕೊಳ್ಳುತ್ತಿದ್ದ ಕಾರಣ ಬೇಗ ಪ್ರಸಿದ್ಧಿ ಪಡೆದರು. ಇವರು ಇಂಗ್ಲೆಂಡ್‌ನ‌ಲ್ಲಿ ಶಿಲ್ಪಶಾಸ್ತ್ರ ಕಾರ್ಯಾಗಾರ ನಡೆಸುತ್ತಿದ್ದಾಗ ಅಲ್ಲಿಯ ಗೋವುಗಳಿಗೆ ಗುಣಪಡಿಸಲಾರದ ರೋಗಗಳು ಕಾಡುತ್ತಿದ್ದವು. ಗಣೇಶ ಭಟ್ಟರು ಅಮೃತ ಶಿಲೆಯ ಕಾಮಧೇನು ಮೂರ್ತಿ ರಚಿಸಿ ಸ್ವತಃ ಪೂಜೆ ಮಾಡಿದರು. ಕ್ರಮೇಣ ರೋಗ ಕಡಿಮೆಯಾದ ಕಾರಣ ಅಲ್ಲಿಯ ಗೋಪಾಲಕರು ಕಾಮಧೇನು ದೇವಸ್ಥಾನ ನಿರ್ಮಿಸಿದ ಕಾರಣ ಇವರ ಖ್ಯಾತಿ ಹೆಚ್ಚಿತು. ಹೊಯ್ಸಳ ಶೈಲಿಯಲ್ಲಿ ವಿಶೇಷ ಪರಿಣತಿ ಪಡೆದ ಇವರು ರಚಿಸಿದ ಹೊಯ್ಸಳ, ಸರಸ್ವತಿ, ಗಣಪತಿ, ಶಿಲಾ ಬಾಲಿಕೆ, ನಾಟ್ಯ ಗಣಪತಿ, ಬುದ್ಧ ಮೊದಲಾದ ಕಲಾಕೃತಿಗಳು ಅಪಾರ ಮೆಚ್ಚುಗೆ ಪಡೆದಿವೆ.

ಇವರಿಗೆ ಶಿಲ್ಪಶ್ರೀ ಪ್ರಶಸ್ತಿ, ದಸರಾ ಪ್ರಶಸ್ತಿ, ಆರ್ಯಭಟ್‌ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಹವ್ಯಕರ ಸಾಧಕರತ್ನ ಪ್ರಶಸ್ತಿ ಸಹಿತ 42ಕ್ಕೂ ಹೆಚ್ಚು ಪ್ರಶಸ್ತಿ ಸಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next