Advertisement

ವಿಕಲಚೇತನರಿಗಿನ್ನು ತಾಲೂಕಲ್ಲೇ ಐಡಿ

02:46 PM Oct 16, 2019 | Suhan S |

ಶಿರಸಿ: ವಿಕಲಚೇತನರ ಗುರುತಿನ ಚೀಟಿ ನೀಡಿಕೆ ಸಂಬಂಧ ಇನ್ನು ಮುಂದೆ ತಾಲೂಕು ವೈದ್ಯಾಧಿಕಾರಿಗಳೇ ದೃಢೀಕರಿಸಿ ಯುನಿಕ್‌ ಐಡಿ ನೀಡುವಂತೆ ಹತ್ತು ದಿನಗಳಲ್ಲಿ ಸರಕಾರದ ಆದೇಶ ಬರಲಿದೆ ಎಂದು ರಾಜ್ಯ ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ತಿಳಿಸಿದರು.

Advertisement

ಅವರು ನಗರದ ತಾಪಂನಲ್ಲಿ ವಿಕಲಚೇತನರ ಜೊತೆ ಸಮಾಲೋಚನೆ ನಡಸಿ, ಈವರೆಗೆ ಗುರುತಿನ ಚೀಟಿ ನೀಡುವ ಅನುಮತಿ ಜಿಲ್ಲಾ ಕೇಂದ್ರ ವೈದ್ಯಾಧಿಕಾರಿಗಳಿಂದ ಆಗಬೇಕಿತ್ತು. ಆದರೆ, ಇದರಿಂದ ಅನೇಕ ಗುಡ್ಡಗಾಡು ಜಿಲ್ಲೆಗಳಿಂದ ಸಮಸ್ಯೆ ಆಗುತ್ತಿದ್ದವು. ಇದನ್ನು ತಪ್ಪಿಸಲು ತಾಲೂಕು ಹಂತದ ವೈದ್ಯರಿಗೇ ಈ ಅವಕಾಶ ನೀಡುವ ಬಗ್ಗೆ ಸರಕಾರ ಚಿಂತಿಸಿದೆ ಎಂದರು.

ರಾಜ್ಯದಲ್ಲಿ ಯುನಿಕ್‌ ಐಡಿ 9,72,305 ಬುದ್ದಿಮಾಂದ್ಯ ಹಾಗೂ ಅಂಗವಿಕಲರಿಗೆ ಕೊಡಬೇಕಿತ್ತು. ಆದರೆ, ಈವರೆಗೆ ಆಗಿದ್ದು ಕೇವಲ 53 ಸಾವಿರ ಜನರಿಗೆ. ಈ ಪ್ರಕ್ರಿಯೆ ವೇಗಗೊಳಿಸಲು ಸರಕಾರ ತಾಲೂಕು ಹಂತದಲ್ಲಿ ದಿನಕ್ಕೆ ಕನಿಷ್ಠ 20 ಜನರಿಗಾದರೂ ಮಾನ್ಯತೆ ಮಾಡಬೇಕು ಎಂದು ಸೂಚಿಸಿದೆ ಎಂದ ಲೀಲಾವತಿ, ಅಂತಾರಾಜ್ಯದ ಗಡಿಗಳಲ್ಲಿ ಎರಡೂ ರಾಜ್ಯದ ಗುರುತಿನ ಚೀಟಿ ಪಡೆದ ಉದಾಹರಣೆಗಳೂ ಇವೆ. ಈ ಕಾರಣದಿಂದ ಎಲ್ಲೇ ಇದ್ದರೂ ಒಂದೇ ಯುನಿಕ್‌ ಐಡಿ ಇರಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದರು.

ಸ್ಥಳೀಯ ಸಂಸ್ಥೆಗಳು ಮೀಸಲಿಡಬೇಕಾದ ವಿಕಲಚೇತನರ ಅನುದಾನದ ಮೊತ್ತವನ್ನು ಸದ್ಬಳಕೆ ಮಾಡಿಕೊಳ್ಳಲು ಹಗೂ ಆಯಾ ವರ್ಷದ ಹಣ ಆಯಾ ವರ್ಷವೇ ಬಳಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆ ಸಮಾಲೋಚನೆ ನಡೆಸುತ್ತಿರುವುದಾಗಿ ಕೂಡ ತಿಳಿಸಿದರು.

ಸರಕಾರದ ಸೂಚನೆ ಪ್ರಕಾರ 21 ಬಗೆಯ ಅಂಗವೈಕಲ್ಯತೆಯನ್ನು ಆಯಾ ಪ್ರಮಾಣದಲ್ಲಿ ಸೂಚಿಸಲಾಗಿದೆ. ಪಾರ್ಶ್ವವಾಯು, ಅರ್ಧಾಂಗವಾತ ಇದರೊಳಗೆ ಸೇರಿಲ್ಲ ಎಂದ ಅವರು, ಬಿಪಿಎಲ್‌ ಕಾರ್ಡ್‌ ಸೌಲಭ್ಯದಾರರಿಗೆ ಸಿಗುವ ವಿಶೇಷ ಸವಲತ್ತು ಎಪಿಎಲ್‌ ಕಾರ್ಡ್‌ ಉಳ್ಳವರರಿಗೂ ಸಿಗುವಂತೆ ಆಗಬೇಕು. ವಿಲಕಚೇತನ ಮಕ್ಕಳನ್ನು ಸ್ವತಂತ್ರವಾಗಿಸುವ ಪ್ರಯತ್ನ ಮಾಡಬೇಕು. ಯಾರಾದರೂ ಪ್ರಸ್ತಾವನೆ ಸಲ್ಲಿಸಿದರೆ ಖಂಡಿತ ಸರಕಾರಕ್ಕೆ ಈ ಬಗ್ಗೆ ಶಿಫಾರಸ್ಸೂ ಮಾಡುವುದಾಗಿ ಹೇಳಿದರು.

Advertisement

ಉತ್ತರ ಕನ್ನಡ ಸೇರಿದಂತೆ ಹಲವಡೆ ಧೂಳು ಹಿಡಿದ ತ್ರಿಚಕ್ರ ಗಾಡಿಗಳನ್ನು ತಕ್ಷಣ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲು ಕೂಡ ಸೂಚನೆ ನೀಡುವುದಾಗಿ ತಿಳಿಸಿದರು.

ಇಲಾಖೆ ಉಪ ನಿರ್ದೇಶಕ ಪ್ರವೀಣ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್‌, ತಹಶೀಲ್ದಾರ್‌ ಎಂ.ಆರ್‌. ಕುಲಕರ್ಣಿ, ತಾಲೂಕು ಅಧಿಕಾರಿ ಡಿ.ಎಂ. ಭಟ್ಟ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next