Advertisement
ಸರಕಾರದ ಅನುದಾನ ಹಣವನ್ನು ವ್ಯಯ ಮಾಡಿದ್ದರೂ ವೇಣೂರು ಅಜಿಲಕೆರೆ ಹಾಗೂ ಎರಡಾಲು ಕೆರೆಗಳು ಹೂಳು ತುಂಬಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಿರುವ ಬಗ್ಗೆ ಉದಯವಾಣಿ ಸುದಿನ ಮೇ 18ರಂದು ವರದಿ ಮಾಡಿ ಗಮನ ಸೆಳೆದಿತ್ತು. ಈ ಬಗ್ಗೆ ಅಭಿವೃದ್ಧಿಗೆ ಚಿಂತನೆ ನಡೆಸಿದ ವೇಣೂರು ಐಸಿವೈಎಂ ಮಂಗಳೂರು ಧರ್ಮಪ್ರಾಂತದ ಗಮನಕ್ಕೆ ತಂದಿದೆ. ವೇಣೂರು ಗ್ರಾ.ಪಂ. ಅನ್ನು ಸಂಪರ್ಕಿಸಿದ ಮಂಗಳೂರು ಧರ್ಮಪ್ರಾಂತದ ಐಸಿವೈಎಂ ನಿರ್ದೇಶಕರು ಭೇಟಿ ನೀಡಿ ಕೆರೆಗಳ ಪರಿಶೀಲನೆ ನಡೆಸಿದರು.
ಐಸಿವೈಎಂ ನಿರ್ದೇಶಕ ವಂ| ರೊನಾಲ್ಡ್ ಡಿ’ಸೋಜಾ ಅವರು ಧರ್ಮಪ್ರಾಂತದ ಘಟಕಗಳನ್ನು ಜತೆಗೂಡಿಸಿ ವೇಣೂರು ಗ್ರಾ.ಪಂ.ನ ಸಹಕಾರದಲ್ಲಿ ಮೇ 29ರಂದು ನಮ್ಮ ಕೆರೆ ಸ್ವತ್ಛ ಕೆರೆ ಆಂದೋಲನದಡಿ ಅಭಿವೃದ್ಧಿಗೆ ಮುಂದಾಗಿದೆ. ಸುಮಾರು 100ಕ್ಕೂ ಅಧಿಕ ಐಸಿವೈಎಂ ಸದಸ್ಯರು ಈ ಸ್ವತ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 6 ಗಂಟೆಯಿಂದ ಸಂಜೆಯ ತನಕ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ. ಮೇ 28ರಂದು ಸಂಜೆ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸುವ ಐಸಿವೈಎಂ ಸದಸ್ಯರು ರಾತ್ರಿ ವೇಣೂರಿನಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗಿನಿಂದಲೇ ಶ್ರಮದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ಜರಗಲಿದ್ದು, ಬೆಳ್ತಂಗಡಿ ತಹಶೀಲ್ದಾರ್‌ಗಣಪತಿ ಶಾಸ್ತ್ರಿ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಮಂಗಳೂರು ಧರ್ಮಪ್ರಾಂತದ ಐಸಿವೈಎಂ ನಿರ್ದೇಶಕ ವಂ| ರೊನಾಲ್ಡ್ ಡಿ’ಸೋಜಾ, ವೇಣೂರು ಚಚ್‌ನ ಧರ್ಮಗುರು ವಂ| ಪೀಟರ್ ಅರನ್ಹಾ, ವಂ| ಬೇಸಿಲ್‌ವಾಸ್, ವಂ| ಅಶ್ವಿನ್ ಕರ್ಡೊಜಾ, ಐಸಿವೈಎಂ ಮಂಗಳೂರು ಧರ್ಮಪ್ರಾಂತದ ಅಧ್ಯಕ್ಷ ಜೈಸನ್ ಪಿರೇರಾ, ವೇಣೂರು ಚರ್ಚ್ ಪಾಲನ ಪರಿಷತ್ ಉಪಾಧ್ಯಕ್ಷ ರೊನಾಲ್ಡ್ ಡಿ’ಸೋಜಾ ಸಹಿತ ಹಲವು ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.
Related Articles
ಮಂಗಳೂರು ಐಸಿವೈಎಂ ಈ ಬಾರಿ ಯುವಜನರ ವರ್ಷದ ಪ್ರಯುಕ್ತ ಪರಿಸರ ಸ್ನೇಹಿ ನಮ್ಮ ಧರ್ಮಾಧ್ಯಕ್ಷರ ಮಾರ್ಗದರ್ಶನದಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಿದ್ದೇವೆ. ಆ ಪ್ರಯುಕ್ತ ವೇಣೂರಿನ ಪ್ರಸಿದ್ಧ ಕೆರೆಯನ್ನು ಅಭಿವೃದ್ಧಿಗೆ ಮುಂದಾಗಿದ್ದೇವೆ. ಮೇ 29ರಂದು ಐಸಿವೈಎಂ ಸದಸ್ಯರು ವೇಣೂರಿಗೆ ಆಗಮಿಸಿ ಜಲ ಉಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಂ| ರೊನಾಲ್ಡ್ ಡಿ’ಸೋಜಾ ಯುವ ನಿರ್ದೇಶಕರು, ಐಸಿವೈಎಂ, ಮಂಗಳೂರು
Advertisement
ಶ್ಲಾಘನೀಯ ಕಾರ್ಯವೇಣೂರು ಅಜಿಲಕೆರೆ ಇತಿಹಾಸ ಪ್ರಸಿದ್ಧವಾದದ್ದು. ಇದರ ಅಭಿವೃದ್ಧಿಗೆ ಸರಕಾರದಿಂದ ಅನುದಾನ ದೊರೆತಿತ್ತು. ಕೆರೆ ಪಾಳು ಬೀಳಬಾರದೆಂಬ ಉದ್ಧೇಶದಿಂದ ಗ್ರಾ.ಪಂ.ನ ನರೇಗಾ ಯೋಜನೆಯಿಂದಲೂ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಐಸಿವೈಎಂ ಸ್ವಯಂಪ್ರೇರಿತವಾಗಿ ಈ ಕೆರೆಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯವಾಗಿದ್ದು, ಈ ಕಾರ್ಯದಲ್ಲಿ ಗ್ರಾ.ಪಂ. ಪೂರ್ಣ ಪ್ರಮಾಣದಲ್ಲಿ ಕೈ ಜೋಡಿಸಲಿದೆ.
ಅರುಣ್ ಕ್ರಾಸ್ತ, ಉಪಾಧ್ಯಕ್ಷರು, ವೇಣೂರು ಗ್ರಾಮ ಪಂಚಾಯತ್