ಬೆಂಗಳೂರು: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾ ಮಿನೇಷನ್(ಐಸಿಎಸ್‌ಇ) ನಡೆಸಿದ 10 ಮತ್ತು ಐಎಸ್‌ಸಿ 12ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬೆಂಗಳೂರಿನ ಗ್ರೀನ್‌ವುಡ್ ಹೈಸ್ಕೂಲ್‌ನ ನೀಲ್ ಮುಲೇ 10ನೇ ತರಗತಿಯಲ್ಲಿ ಶೇ. 99 ಅಂಕ ಗಳಿಸುವ ಮೂಲಕ ದಕ್ಷಿಣ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಐಎಸ್‌ಸಿ ನಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಸನ್‌ಯುಕ್ತ ಗಿರಿ ಹಾಗೂ ಇರಾ ಗುಪ್ತಾ ಶೇ.99 ಅಂಕ ಪಡೆಯುವ ಮೂಲಕ ದೇಶಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.10ನೇ ತರಗತಿಗೆ 1,83,387 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.98.51 ಫಲಿತಾಂಶ ಬಂದಿದೆ. 12 ತರಗತಿಗೆ 80,880 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.96.21 ಫಲಿತಾಂಶ ಪ್ರಕಟವಾಗಿದೆ.
10ನೇ ತರಗತಿ ಬಾಲಕಿಯರು ಶೇ. 98.95 ಹಾಗೂ ಬಾಲಕರು ಶೇ.98.15 ಹಾಗೂ ಇದೇ ರೀತಿ 12ನೇ ತರಗತಿಯ ಬಾಲಕಿಯರು ಶೇ.97.63 ಹಾಗೂ ಬಾಲಕರು ಶೇ.94.96 ಅಂಕ ಗಳಿಸಿದ್ದಾರೆ. ರಾಜ್ಯದಲ್ಲಿ ಐಸಿಎಸ್‌ಇ ಯ 306 ಶಾಲೆಗಳಿಂದ ಒಟ್ಟಾರೆ 16,530 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದು, 16,493 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಶೇ. 99.78ರಷ್ಟು ಫಲಿತಾಂಶ ಬಂದಿದೆ. 31 ಐಎಸ್‌ಸಿ ಶಾಲೆಗಳಿಂದ 1620 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದರು. ಈ ಪೈಕಿ 1,607 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.99.20 ಫಲಿತಾಂಶ ಬಂದಿದೆ.
ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಂಡು ಓದುತ್ತಿದ್ದೆ. ಪಾಲಕರು ಕೂಡ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಸಂಶಯ ಬಂದರೂ ಶಿಕ್ಷಕರಲ್ಲಿ ಕೇಳಿ ಬಗೆಹರಿಸಿಕೊಳ್ಳುತ್ತಿದೆ.
– ನೀಲ್ ಮುಲೇ, ಗ್ರೀನ್‌ವುಡ್ ಹೈಸ್ಕೂಲ್ ಬೆಂಗಳೂರು, ದಕ್ಷಿಣ ವಿಭಾಗಕ್ಕೆ ಪ್ರಥಮ