ಇಸ್ಲಾಮಾಬಾದ್ : ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಕೇಸಿನ ವಿಚಾರಣೆ ಇಂದು ‘ದ ಹೇಗ್ ‘ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಸಾಗುತ್ತಿದ್ದಂತೆಯೇ ಪಾಕಿಸ್ಥಾನದ ತಾತ್ಕಾಲಿಕ ನ್ಯಾಯಾಧೀಶ, 69ರ ಹರೆಯದ ತಸಾದಕ್ ಹುಸೇನ್ ಗೀಲಾನಿ ಅವರಿಗೆ ಹೃದಯಾಘಾತವಾಯಿತು.
ಗೀಲಾನಿ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದು ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಾಕ್ ಮಾಧ್ಯಮ ವರದಿ ತಿಳಿಸಿದೆ.
ಐಸಿಜೆಯಲ್ಲಿ ಜಾಧವ್ ಅವರ ನಾಲ್ಕು ದಿನಗಳ ಬಹಿರಂಗ ವಿಚಾರಣೆ ಇಂದು ಸೋಮವಾರದಿಂದ ಆರಂಭಗೊಂಡಿದೆ.
ಜಾಧವ್ ಅವರನ್ನು ಐಸಿಜೆಯಲ್ಲಿ ಪ್ರತಿನಿಧಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ಕುಲಭೂಷಣ್ ಜಾಧವ್ ಭಾರತೀಯ ಬೇಹುಗಾರನೆಂಬ ಆರೋಪ ಮೇಲೆ ಪಾಕಿಸ್ಥಾನ ಅವರನ್ನು ತಪ್ಪಾಗಿ ಬಂಧಿಸಿದೆ ಎಂದು ವಾದಿಸಿ, ಪಾಕ್ ಮಿಲಿಟರಿ ನ್ಯಾಯಾಲಯವನ್ನು ಖಂಡಿಸಿ, ಜಾಧವ್ ವಿರುದ್ಧದ ಪಾಕ್ ಆರೋಪಗಳನ್ನು ಖಂಡತುಂಡವಾಗಿ ಅಲ್ಲಗಳೆದರು.
ಇಂದು ಐಸಿಜೆಯಲ್ಲಿ ಒಂದು ತಾಸಿಗೂ ಹೆಚ್ಚಿನ ವಿಚಾರಣೆ ನಡೆದಿದ್ದು ನಾಳೆ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.