Advertisement
ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪಾಡಿ ಪೇಟೆ ಯಲ್ಲಿ ಗ್ರಾಮ ಕರಣಿಕರ ಕಚೇರಿ ಕಾರ್ಯಾ ಚರಿಸುತ್ತಿದೆ. ವಿಎ ಕಚೇರಿಗೆ ಹೊಸ ಕಟ್ಟಡ ನಿರ್ಮಾಣಗೊಂಡಿದ್ದರೂ, ಕಾಮಗಾರಿ ಅಪೂರ್ಣಗೊಂಡಿರುವ ಕಾರಣ ಗ್ರಾಮ ಲೆಕ್ಕಿಗರು ಗಾಳಿ ಮಳೆ ಯಿಂದ ರಕ್ಷಣೆ ಇಲ್ಲದ ಕಚೇರಿಯಲ್ಲಿಯೇ ಕೆಲಸ ಮಾಡಬೇಕಾಗಿದೆ.
Related Articles
Advertisement
ಜೋರಾಗಿ ಗಾಳಿ, ಮಳೆ ಬಂದಲ್ಲಿ ನೀರು ಕಚೇರಿಯೊಳಗೆ ನುಗ್ಗಿ ದಾಖಲೆಗಳು ಒದ್ದೆಯಾಗುತ್ತಿವೆ. ನೀರು ಗೋಡೆಗಳ ಮಧ್ಯೆ ಜಿನುಗುತ್ತದೆ. ಕೊಠಡಿಯೊಳಗೆ ಸರಿಯಾಗಿ ಗಾಳಿ, ಬೆಳಕು ಸಹ ಇಲ್ಲ. ಗ್ರಾಮಸ್ಥರು ಬಂದಲ್ಲಿ ಕಚೇರಿಯ ಹೊರಗೆ ಕೊಡೆ ಹಿಡಿದು ನಿಂತುಕೊಳ್ಳಬೇಕಿದೆ.
ಅಪೂರ್ಣ ಕಟ್ಟಡ:
ನೇರ್ಲದಲ್ಲಿರುವ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಪಕ್ಕದಲ್ಲೇ ಗ್ರಾಮಕರಣಿಕರ ಕಚೇರಿ ಹಾಗೂ ಅಂಚೆ ಕಚೇರಿಗಾಗಿ ಕೌಕ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಎರಡು ಕೊಠಡಿಯ ಕಟ್ಟಡ ನಿರ್ಮಿಸಲಾ ಗುತ್ತಿದ್ದೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೊಸ ಕಟ್ಟಡ ವಾಗಿದ್ದರೂ ಇಲ್ಲೂ ಮಳೆ ನೀರು ಕೊಠಡಿ ಯೊಳಗೆ ಬರುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದಷ್ಟೂ ಬೇಗ ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಕರಣಿಕರ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಲಾಖೆಗೆ ಜಾಗವಿದೆ:
ನೇರ್ಲದಲ್ಲಿ ಗ್ರಾಮಕರಣಿಕರ ವಸತಿಗೃಹಕ್ಕೆ 11 ಸೆಂಟ್ಸ್ ಜಾಗ ಕಾದಿರಿಸ ಲಾಗಿದೆ. ಆದರೂ ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಮುಂದೆ ಬಂದಿಲ್ಲ ಎಂಬ ಆರೋಪವೂ ಇದೆ. ಕಂದಾಯ ಇಲಾಖೆಗೆಂದೇ ಕಾದಿರಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅಲ್ಲೇ ಗ್ರಾಮಕರಣಿಕರ ಕಚೇರಿಯೂ ಆರಂಭಿಸಬಹುದು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಕ್ರಿಯಾ ಯೋಜನೆ ತಯಾರು :
15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಹೊಸ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ಹಣ ಕಡಿಮೆಯಾದ ಕಾರಣ ಕಟ್ಟಡ ಅಪೂರ್ಣವಾಗಿದೆ. ವಿದ್ಯುತ್, ವಯರಿಂಗ್ ಹಾಗೂ ಇತರ ಕೆಲಸಗಳು ಬಾಕಿ ಇವೆ. ಈಗ ಮತ್ತೆ 15ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಶೀಘ್ರ ಕೆಲಸ ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು ಎಂದು ಗ್ರಾ.ಪಂ. ಕೌಕ್ರಾಡಿ ಪಿಡಿಒ ಮಹೇಶ್ ತಿಳಿಸಿದ್ದಾರೆ.
ಇಲ್ಲಿನ ಗ್ರಾಮಕರಣಿಕರ ಕಚೇರಿಗೆ ಗಾಳಿ, ಮಳೆಯಿಂದ ಸರಿಯಾದ ರಕ್ಷಣೆ ಇಲ್ಲ. ಗ್ರಾ.ಪಂ. ಹೊಸ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. -ಕುರಿಯಾಕೋಸ್ ಟಿ.ಎಂ., ಸದಸ್ಯರು, ಗ್ರಾ.ಪಂ. ಕೌಕ್ರಾಡಿ
ಈಗ ಇರುವ ಗ್ರಾಮಕರಣಿಕರ ತಾತ್ಕಾಲಿಕ ಕಚೇರಿಯೊಳಗೆ ಮಳೆ ನೀರು ಬಂದು ದಾಖಲೆಗಳು ಒದ್ದೆಯಾಗುತ್ತಿವೆ. ಸಣ್ಣ ಕೊಠಡಿಯಾದ ಇಲ್ಲಿ ಕರ್ತವ್ಯ ನಿರ್ವಹಣೆ ಕಷ್ಟವಾಗಿದೆ. -ಶಶಿಕಲಾ, ಗ್ರಾಮಕರಣಿಕರು, ಇಚ್ಲಂಪಾಡಿ