Advertisement
ಶಾಲೆ-ಕಾಲೇಜುಗಳಲ್ಲಿ ಪಾಠದ ಜೊತೆಗೆ ಮೋಜು, ಮಸ್ತಿ, ಆಟ ಎಲ್ಲವೂ ಸರ್ವೇ ಸಾಮಾನ್ಯ. ಆದರೆ ನಾವು ಅಂತಿಮ ಬಿ.ಎ ಓದುತ್ತಿರುವಾಗ ಆಡಿದ ಒಂದು ಆಟ ಮಾತ್ರ ಎಂದೆಂದಿಗೂ ನೆನಪಿರುತ್ತದೆ. ಆಟದ ಹೆಸರು ಐನೂರರ ಆಟ. ಅಂದರೆ, ಐನೂರು ರೂಪಾಯಿಯನ್ನು ನಮ್ಮ ಕ್ಲಾಸ್‌ರೂಮ್ ಮುಂಭಾಗದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಹಾಕಿ, ಅದನ್ನು ನೋಡಿದಾಗ ಬೇರೆಯವರು ಯಾವ ರೀತಿ ವರ್ತಿಸುತ್ತಾರೆ ಅಂತ ಮರೆಯಲ್ಲಿ ನಿಂತು ಮಜಾ ತೆಗೆದುಕೊಳ್ಳೋಣ ಅಂತ ಮಾತಾಡಿಕೊಂಡಿದ್ದೆವು.
Related Articles
Advertisement
ನಮ್ಮ ಕ್ಲಾಸ್‌ನ ಸರ್ ಒಬ್ಬರು ಕಾರಿಡಾರ್‌ನಲ್ಲಿ ನಡೆದು ಬಂದಿದ್ದರಿಂದ ಐನೂರರ ನೋಟನ್ನು ತೆಗೆದುಕೊಳ್ಳದೆ ಕ್ಲಾಸ್‌ರೂಮ್ ಒಳಗೆ ಓಡಿದೆವು. ಅವರು ಅದನ್ನು ತೆಗೆದುಕೊಂಡು ಕ್ಲಾಸ್‌ನೊಳಗೆ ಬಂದರು. ನಮಗೆ ಆಗಲೂ ನಗು ತಡೆಯಲಾಗಲಿಲ್ಲ. ಮೇಷ್ಟ್ರು ಬಕ್ರಾ ಆಗಿಬಿಟ್ರಲ್ಲ ಎಂದುಕೊಂಡು ಬಾಯಿ ಮುಚ್ಚಿಕೊಂಡು ಒಳಗೊಳಗೇ ನಗುತ್ತಿದ್ದೆವು. ಅವರಿಗೆ ಸಿಟ್ಟು ಬಂದು ಬೈಯಲು ಆರಂಭಿಸಿದರು. ಇದಕ್ಕೆ ಕಾರಣ, ಪಿಯುಸಿಯ ಹುಡುಗಿಯರು ನಾವು ಮಾಡುತ್ತಿರುವ ಚೇಷ್ಟೆಯನ್ನು ಅವರಿಗೆ ಹೇಳಿ ಬಂದಿದ್ದರು. ಅವರು ನಮಗೆ ಜೋರಾಗಿ ಬೈಯಲು ಶುರು ಮಾಡಿದರು.
ಆಗ ನಾವು, “ಸರ್, ತಮಾಷೆಗೆ ಮಾಡಿದ್ದು. ಈ ವಿಚಾರ ನಿಮ್ಮ ತನಕ ಬರುತ್ತದೆ ಅಂತ ಅಂದುಕೊಂಡಿರಲಿಲ್ಲ. ನಾವು ಮಾಡಿದ ತಪ್ಪಿಗೆ ನೀವು ಏನೇ ಶಿಕ್ಷೆ ಕೊಟ್ಟರೂ ತೆಗೆದುಕೊಳ್ಳುತ್ತೇವೆ’ ಎಂದೆವು. ಅವರು ಕೊಟ್ಟ ಶಿಕ್ಷೆ ಏನು ಗೊತ್ತಾ? ಬೆಳಿಗ್ಗೆಯಿಂದ ಐನೂರರ ಆಟಕ್ಕೆ ಬಕ್ರಾ ಆದವರಿಗೆಲ್ಲಾ ಐಸ್‌ಕ್ರಿಮ್ ಕೊಡಿಸಬೇಕೆಂದು ಹೇಳಿಬಿಟ್ಟರು. ಮನಸ್ಸಿಲ್ಲದಿದ್ದರೂ ಅದನ್ನು ನಾವು ಒಪ್ಪಿಕೊಳ್ಳಲೇಬೇಕಿತ್ತು. ಇಪ್ಪತ್ತೂಂದು ಐಸ್‌ಕ್ರೀಮ್ ತಂದು, ನಮ್ಮ ಸರ್‌ಗೆ ಒಂದು ಹಾಗೂ ಬಕ್ರಾ ಆದ ಪಿಯುಸಿ ಓದುತ್ತಿದ್ದ 13 ವಿದ್ಯಾರ್ಥಿಗಳಿಗೆ ಮತ್ತು ಎಂಟನೇ ತರಗತಿಯ ಏಳು ವಿದ್ಯಾರ್ಥಿಗಳಿಗೆ ಕೊಟ್ಟವು. ಅದನ್ನವರು ಖುಷಿಯಿಂದ ತೆಗೆದುಕೊಂಡು, ನಾಳೆ ಸಾವಿರದ ನೋಟನ್ನು ತಂದು ಇಡಿ. ನಂತರ ಮಧ್ಯಾಹ್ನ ನಮಗೆಲ್ಲಾ ಹೋಳಿಗೆ ಊಟ ಕೊಡಿಸಿ ಎಂದು ಅಪಹಾಸ್ಯ ಮಾಡುತ್ತಾ ಮುಂದೆಹೋದರು.
ತಮಾಷೆ ಮಾಡಲು ಹೋಗಿ ನನ್ನ ಸ್ನೇಹಿತನ ಐನೂರರ ನೋಟಿಗೆ ಕತ್ತರಿ ಬಿದ್ದಿದ್ದರಿಂದ, ಮರುದಿನ ನಾನು ಮತ್ತು ತಂಡದ ಇತರರು ಅವನಿಗೆ ಕೊಡಬೇಕಾದ ಹಣ ಕೊಟ್ಟೆವು. ಮತ್ತೆ ಯಾವತ್ತಿಗೂ ಅಂತ ದುಬಾರಿ ಆಟ ಆಡಲು ಹೋಗಲಿಲ್ಲ.
ಮಧುಕುಮಾರ್ ಬಿಳಿಚೋಡು