ಲಂಡನ್: ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಎಷ್ಟು ಮಂದಿ ಸ್ಪಿನ್ನರ್ಗಳನ್ನು ಕಣಕ್ಕಿಳಿಸಲಿದೆ, ಭಾರತದ ಸ್ಪಿನ್ ವ್ಯೂಹ ಹೇಗಿದ್ದೀತು ಎಂಬ ಬಗ್ಗೆ ಎದುರಾಳಿ ಆಸ್ಟ್ರೇಲಿಯ ಪಾಳೆಯದಲ್ಲಿ ಗಂಭೀರ ಚರ್ಚೆ, ಚಿಂತನೆಗಳು ನಡೆದಿವೆ ಎಂಬ ಬಗ್ಗೆ ವರದಿಯಾಗಿದೆ.
ಸಾಮಾನ್ಯವಾಗಿ ಇಂಗ್ಲೆಂಡ್ ಟ್ರಾಕ್ಗಳೆಲ್ಲ ವೇಗಿಗಳಿಗೆ ಹೆಚ್ಚಿನ ನೆರವು ನೀಡುವುದರಿಂದ ಇಲ್ಲಿ ಸ್ಪಿನ್ ಬಳಕೆ ಕಡಿಮೆ. ಆದರೆ ಆಸ್ಟ್ರೇಲಿಯವನ್ನು ಸ್ಪಿನ್ ಮೂಲಕ ಮಣಿಸಬಹುದು ಎಂಬುದು ಚಿಂತಕರ ಲೆಕ್ಕಾಚಾರ. ಈ ಕುರಿತು ಆಸೀಸ್ ತಂಡದ ಸಹಾಯಕ ಕೋಚ್ ಡೇನಿಯಲ್ ವೆಟರಿ ಮಾಧ್ಯಮ ದವರೊಂದಿಗೆ ಮಾತಾಡಿದ್ದು, ಭಾರತದ ಸ್ಪಿನ್ ಸಂಭಾವ್ಯರ ಕುರಿತು ನಾವು ಬಹಳಷ್ಟು ಚರ್ಚಿಸಿದ್ದೇವೆ ಎಂದಿದ್ದಾರೆ.
“ನಮ್ಮ ಪ್ರಕಾರ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅವರ ಕಾಂಬಿನೇಶನ್ ಇರಲಿದೆ. ಇಬ್ಬರೂ ಬ್ಯಾಟಿಂಗ್ನಲ್ಲೂ ತಂಡದ ನೆರವಿಗೆ ನಿಲ್ಲಬಲ್ಲರು. ಇಂಗ್ಲೆಂಡ್ನಲ್ಲಿ ಅಶ್ವಿನ್ ದಾಖಲೆ ಉತ್ತಮ ಮಟ್ಟದಲ್ಲಿದೆ” ಎಂಬುದಾಗಿ ವೆಟರಿ ಹೇಳಿದರು.
ಕಳೆದ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇವರಿಬ್ಬರು ಭಾರತದ 2-1 ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಶ್ವಿನ್ 25 ವಿಕೆಟ್, ಜಡೇಜ 22 ವಿಕೆಟ್ ಹಾರಿಸಿದ್ದರು.
Related Articles
“ಓವಲ್ ವಿಕೆಟ್ ಹಾಗೆಯೇ ಇದೆ. ದಿನ ಕಳೆದಂತೆ ಇದು ಸ್ಪಿನ್ನಿಗೆ ನೆರವಾಗಲಿದೆ” ಎಂದೂ ವೆಟರಿ ಅಭಿಪ್ರಾಯಪಟ್ಟರು.
ಯಾರೇ ಗೆದ್ದರೂ ದಾಖಲೆ!
ಈ ಟೆಸ್ಟ್ ಪಂದ್ಯವನ್ನು ಯಾರೇ ಗೆದ್ದರೂ ಅಲ್ಲೊಂದು ಇತಿಹಾಸ ನಿರ್ಮಾಣವಾಗಲಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯ ತಂಡ ಗಳೆರಡೂ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದಿವೆ. ಟೆಸ್ಟ್ ವಿಶ್ವಕಪ್ ಗೆದ್ದರೆ ಈ ಮೂರನ್ನೂ ಜಯಿಸಿದ ವಿಶ್ವದ ಪ್ರಪ್ರಥಮ ತಂಡವಾಗಿ ಮೂಡಿಬರಲಿವೆ.
ಅಂದಹಾಗೆ, ಇಲ್ಲಿ ಗೆಲ್ಲಲೇ ಬೇಕೆಂದಿಲ್ಲ. ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರೂ ಸಾಕು. ಆ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕಿರೀಟ ಏರಿಸಿಕೊಳ್ಳಲಿದೆ.
ಡಬ್ಲ್ಯುಟಿಸಿ ಇಲೆವೆನ್ನಲ್ಲಿ ಭಾರತದ ಮೂವರು
2021-23ನೇ ಅವಧಿಯ ವಿಶ್ವ ಟೆಸ್ಟ್ ಚಾಂಪಿಯನ್ ಯಾರು ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಲಭಿಸಲಿದೆ. ಅಷ್ಟರಲ್ಲಿ “ಕ್ರಿಕೆಟ್ ಆಸ್ಟ್ರೇಲಿಯ’ ಈ ಅವಧಿಯ ಅತ್ಯುತ್ತಮ ಆಟಗಾರರ ತಂಡವೊಂದನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಮೂವರಿದ್ದಾರೆ. ವಿಶೇಷವೆಂದರೆ, ವಿರಾಟ್ ಕೊಹ್ಲಿ ಅಥವಾ ಚೇತೇಶ್ವರ್ ಪೂಜಾರ ಇಲ್ಲಿ ಸ್ಥಾನ ಪಡೆದಿಲ್ಲ. ನಾಯಕ ರೋಹಿತ್ ಶರ್ಮ ಕೂಡ ಇಲ್ಲ. ಹಾಗಾದರೆ ಭಾರತದ ಮೂವರು ಕ್ರಿಕೆಟಿಗರು ಯಾರು ಎಂಬ ಕುತೂಹಲ ಸಹಜ.
ಕಾರು ಅಪಘಾತಕ್ಕೆ ಸಿಲುಕಿ ಈಗ ತಂಡದಿಂದ ಬೇರ್ಪಟ್ಟಿರುವ ರಿಷಭ್ ಪಂತ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಈ ತಂಡದ ವಿಕೆಟ್ ಕೀಪರ್ ಕೂಡ ಹೌದು. ಈ ಅವಧಿಯಲ್ಲಿ ಪಂತ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 43.41ರ ಸರಾಸರಿಯಲ್ಲಿ 868 ರನ್ ಬಾರಿಸಿ ಮಿಂಚಿದ್ದರು.
ಭಾರತದ ಉಳಿದಿಬ್ಬರೆಂದರೆ ಸ್ಪಿನ್ ಆಲ್ರೌಂಡರ್ಗಳಾದ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್. ಇವರಿಬ್ಬರು ಎದುರಾಳಿ ತಂಡಗಳಿಗೆ ಘಾತಕವಾಗಿ ಪರಿಣಮಿಸಿದ್ದರು.
ಬೆಸ್ಟ್ ಇಲೆವೆನ್: ಉಸ್ಮಾನ್ ಖ್ವಾಜಾ, ದಿಮುತ್ ಕರುಣಾರತ್ನೆ, ಬಾಬರ್ ಆಜಂ, ಜೋ ರೂಟ್, ಟ್ರ್ಯಾವಿಸ್ ಹೆಡ್, ರಿಷಭ್ ಪಂತ್, ರವೀಂದ್ರ ಜಡೇಜ, ಆರ್. ಅಶ್ವಿನ್, ಪ್ಯಾಟ್ ಕಮಿನ್ಸ್, ಕಾಗಿಸೊ ರಬಾಡ, ಜೇಮ್ಸ್ ಆ್ಯಂಡರ್ಸನ್.
ಹೇಝಲ್ವುಡ್ ಫೈನಲ್ ಪಂದ್ಯಕ್ಕಿಲ್ಲ
ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಅಣಿಯಾಗಿರುವ ಆಸ್ಟ್ರೇಲಿಯಕ್ಕೆ ದೊಡ್ಡ ಹೊಡೆತವೊಂದು ಎದುರಾಗಿದೆ. ವೇಗಿ ಜೋಶ್ ಹೇಝಲ್ವುಡ್ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇವರ ಸ್ಥಾನಕ್ಕೆ ಮೈಕಲ್ ನೇಸರ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಮೈಕಲ್ ನೇಸರ್ ಇಂಗ್ಲೆಂಡ್ನಲ್ಲೇ ಇದ್ದು, ಕೌಂಟಿ ಚಾಂಪಿಯನ್ಶಿಪ್ನಲ್ಲಿ ಗ್ಲಾಮರ್ಗನ್ ಪರ ಆಡುತ್ತಿದ್ದಾರೆ. ಕಳೆದ 3 ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸಿದ್ದಾರೆ. ಯಾರ್ಕಶೈರ್ ವಿರುದ್ಧ 32ಕ್ಕೆ 7 ವಿಕೆಟ್ ಕೆಡವಿ ಗಮನ ಸೆಳೆದಿದ್ದರು.
ಆದರೆ ಆಡುವ ಬಳಗದಲ್ಲಿ ಹೇಝಲ್ವುಡ್ ಸ್ಥಾನಕ್ಕೆ ಸ್ಕಾಟ್ ಬೋಲ್ಯಾಂಡ್ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ.