ಮುಂಬೈ: 2011ರ ಏಕದಿನ ವಿಶ್ವಕಪ್ ಫೈನಲಿಸ್ಟ್ ಗಳಾದ ಭಾರತ ಮತ್ತು ಶ್ರೀಲಂಕಾ ತಂಡಗಳು 2023ರ ವಿಶ್ವಕಪ್ ನಲ್ಲಿ ಇಂದು ಮುಖಾಮುಖಿಯಾಗುತ್ತಿದೆ. ಅಂದು ಫೈನಲ್ ಪಂದ್ಯ ನಡೆದಿದ್ದ ಮುಂಬೈನ ವಾಂಖೆಡೆಯಲ್ಲಿ ಇಂದು ಪಂದ್ಯ ಆಯೋಜನೆಯಾಗಿರುವುದು ವಿಶೇಷ.
ಆಡಿದ ಆರೂ ಪಂದ್ಯಗಳನ್ನು ಗೆದ್ದು ಸೆಮಿ ಫೈನಲ್ ಪ್ರವೇಶವನ್ನು ಖಾತ್ರಿ ಪಡಿಸಿಕೊಂಡಿರುವ ಭಾರತ ಸುಸ್ಥಿತಿಯಲ್ಲಿದ್ದರೆ, ಕೇವಲ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಶ್ರೀಲಂಕಾ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ವಾಂಖೆಡೆ ಅಂಗಳದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ.
ಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಧನಂಜಯ ಡಿಸಿಲ್ವಾ ಬದಲು ದುಶಾನ್ ಹೇಮಂತ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ವಿಶ್ವಕಪ್‌ನಲ್ಲಿ ಶ್ರೀಲಂಕಾದ ನಿರ್ವಹಣೆ ನೀರಸವಾಗಿದೆ. ಗಾಯದ ಸಮಸ್ಯೆ ಮತ್ತು ಪ್ರಮುಖ ಆಟಗಾರರು ಲಭ್ಯವಿಲ್ಲದ ಕಾರಣ ತಂಡ ಶ್ರೇಷ್ಠ ನಿರ್ವಹಣೆ ನೀಡಲು ಒದ್ದಾಡುತ್ತಿದೆ. ತಂಡದ ಸದೀರ ಸಮರ ವಿಕ್ರಮ ಉತ್ತಮ ಫಾರ್ಮ್ನಲ್ಲಿದ್ದು ಆಡಿದ ಆರು ಪಂದ್ಯಗಳಿಂದ 331 ರನ್ ಗಳಿಸಿ ದ್ದಾರೆ. ಒಂದು ಶತಕ ಹೊಡೆದಿದ್ದಾರೆ. ಪಾಥುಮ್ ನಿಸ್ಸಂಕ ಕೂಡ ಉತ್ತಮ ಫಾರ್ಮ್ನಲ್ಲಿದ್ದು ಗಿಲ್ ಬಳಿಕ ವರ್ಷವೊಂದರಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಇನ್ನೋರ್ವ ಆಟಗಾರ ಎಂದೆನಿಸಿ ಕೊಂಡಿದ್ದಾರೆ. ತಂಡದ ಬೌಲಿಂಗ್ ಅಷ್ಟೊಂದು ತೀಕ್ಷ್ಣವಾಗಿಲ್ಲ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ಪಾಥುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ವಿ.ಕೀ/ನಾ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ದುಶಾನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶನಕ.