ಮುಂಬಯಿ: ಐಸಿಸಿ ವನಿತಾ ವಿಶ್ವಕಪ್‌ನಲ್ಲಿ ನಮ್ಮ ತಂಡದ ಅಮೋಘ ನಿರ್ವಹಣೆಯಿಂದ ಭಾರತದಲ್ಲಿ ವನಿತಾ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿದೆ. ಅಭಿಮಾನಿಗಳು ಕೂಡ ನಮ್ಮಿಂದ ಉತ್ತಮ ಸಾಧನೆಯನ್ನು ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ ವನಿತಾ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ನಾವು ಕಾತರದಿಂದ ಇದ್ದೇವೆ ಎಂದು ಭಾರತೀಯ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದ ವನಿತಾ ವಿಶ್ವಕಪ್‌ನ ಫೈನಲಿಗೇರಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಭಾರತೀಯ ತಂಡವು ಫೈನಲ್‌ನಲ್ಲಿ ರೋಮಾಂಚಕವಾಗಿ ಹೋರಾಡಿದರೂ ಅಂತಿಮ ಹಂತದಲ್ಲಿ ನಾಟಕೀಯವಾಗಿ ಕುಸಿದು ಪ್ರಶಸ್ತಿಯಿಂದ ವಂಚಿತವಾಯಿತು. ಮತ್ತೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇಂಗ್ಲೆಂಡ್ ಪ್ರಶಸ್ತಿ ಜಯಿಸಿತು. ಭಾರತೀಯ ತಂಡದ ಸದಸ್ಯರು ಬುಧವಾರ ಮುಂಬಯಿಗೆ ಆಗಮಿಸಿದರು.
ಶೀಘ್ರದಲ್ಲಿಯೇ ನಿವು ವನಿತಾ ಐಪಿಎಲ್ ಅನ್ನು ನಿರೀಕ್ಷಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಥಾಲಿ “ನೀವು ಕೆಲವು ವರ್ಷಗಳ ಹಿಂದೆ ಈ ಪ್ರಶ್ನೆ ಕೇಳುತ್ತಿದ್ದರೆ ನಾನು ಇಲ್ಲ ಎಂದು ಹೇಳುತ್ತಿದ್ದೆನೊ. ಆದರೆ ಇದೀಗ ನಮ್ಮ ಆಟದ ಗುಣಮಟ್ಟ ಉತ್ತಮಗೊಂಡಿದೆ. ವಿಶ್ವಕಪ್‌ನಲ್ಲಿ ನಮ್ಮ ನಿರ್ವಹಣೆಯೇ ಇದಕ್ಕೆ ಸಾಕ್ಷಿ. ಹಾಗಾಗಿ ವನಿತಾ ಐಪಿಎಲ್‌ನ ನಿರೀಕ್ಷೆಯಲ್ಲಿದ್ದೇವೆ ಎಂದು ಮಿಥಾಲಿ ತಿಳಿಸಿದರು.
300 ಪ್ಲಸ್ ರನ್ ಗಳಿಸುವುದು. ಪ್ರತಿಯೊಂದು ತಂಡದ ಸದಸ್ಯರೊಬ್ಬರು ಶತಕ ದಾಖಲಿಸುವುದು ಮತ್ತು ಬೌಲರೊಬ್ಬರು ಐದು ವಿಕೆಟ್ ಕೀಳುತ್ತಿರುವುದನ್ನು ನಾವು ನೋಡಿದ್ದೇವೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನಲ್ಲಿರುವ ಲೀಗ್ ಕೂಟಗಳು ವನಿತಾ ಆಟಗಾರ್ತಿಯರ ನಿರ್ವಹಣೆ ಉತ್ತಮಗೊಳ್ಳಲು ಕಾರಣವಾಗಿದೆ. ಐಪಿಎಲ್ ಕೂಟ ನಡೆದರೆ ದೇಶೀಯ ಆಟಗಾರ್ತಿಯರಿಗೂ ತಮ್ಮ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಮಿಥಾಲಿ ಹೇಳಿದರು.