ಮುಂಬೈ: 2023ರ ವರ್ಷದ ಟಿ20, ಏಕದಿನ ತಂಡಗಳನ್ನು ಪ್ರಕಟಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇದೀಗ ವರ್ಷದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಏಕದಿನ ತಂಡದಲ್ಲಿ ಆರು ಮಂದಿ ಭಾರತೀಯರು ಸ್ಥಾನ ಪಡೆದಿದ್ದರೆ, ಟೆಸ್ಟ್ ತಂಡದಲ್ಲಿ ಕೇವಲ ಇಬ್ಬರಿದ್ದಾರೆ. ಅದರಲ್ಲಿಯೂ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಐಸಿಸಿ ತಂಡದಲ್ಲಿಲ್ಲ.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಐಸಿಸಿ ವರ್ಷದ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
11 ಜನರ ತಂಡದಲ್ಲಿ ಐದು ಮಂದಿ ಆಸ್ಟ್ರೇಲಿಯನ್ನರು ಅವಕಾಶ ಪಡೆದಿದ್ದಾರೆ. ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್, ಆರಂಭಿಕ ಉಸ್ಮಾನ್ ಖವಾಜಾ, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಮತ್ತು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಂಡದಲ್ಲಿದ್ದಾರೆ.
ಉಳಿದಂತೆ ಲಂಕಾದ ಆರಂಭಿಕ ಆಟಗಾರ ದಿಮ್ಮುತ್ ಕರುಣರತ್ನೆ, ಕಿವೀಸ್ ನ ಕೇನ್ ವಿಲಿಯಮ್ಸನ್, ಇತ್ತೀಚೆಗೆ ವಿದಾಯ ಹೇಳಿದ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಐಸಿಸಿ ವರ್ಷದ ತಂಡದಲ್ಲಿದ್ದಾರೆ.
2023 ರ ಐಸಿಸಿ ವರ್ಷದ ಟೆಸ್ಟ್ ತಂಡ: ಉಸ್ಮಾನ್ ಖವಾಜಾ, ದಿಮುತ್ ಕರುಣರತ್ನೆ, ಕೇನ್ ವಿಲಿಯಮ್ಸನ್, ಜೋ ರೂಟ್, ಟ್ರಾವಿಸ್ ಹೆಡ್, ರವೀಂದ್ರ ಜಡೇಜಾ, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾ), ರವಿಚಂದ್ರನ್ ಅಶ್ವಿನ್, ಮಿಚೆಲ್ ಸ್ಟಾರ್ಕ್, ಸ್ಟುವರ್ಟ್ ಬ್ರಾಡ್.