ಮುಂಬೈ: ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಭಾರತೀಯ ಕ್ರಿಕೆಟಿಗರು ಇತ್ತೀಚಿನ ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೂರು ಸ್ಥಾನ ಮೇಲಕ್ಕೇರಿದ್ದು, ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಕೇಪ್ ಟೌನ್ ನಲ್ಲಿ ವಿಕೆಟ್ ಉರುಳುತ್ತಿದ್ದರೂ ಬ್ಯಾಟಿಂಗ್ ಸಾಹಸ ಪ್ರದರ್ಶಿಸಿದ ಕಾರಣ ಅವರು ರ್ಯಾಂಕಿಂಗ್ ನಲ್ಲಿ ಉನ್ನತಿ ಸಾಧಿಸಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದಾರೆ. ನಾಲ್ಕು ಸ್ಥಾನಗಳ ಜಿಗಿತದೊಂದಿಗೆ, ಅವರು 10 ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಪ್ರಭಾವಶಾಲಿ ಶತಕ ಬಾರಿಸಿದ ಏಡೆನ್ ಮಾರ್ಕ್ರಾಮ್ ಒಂಬತ್ತು ಸ್ಥಾನಗಳ ಜಿಗಿತದೊಂದಿಗೆ 20ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್ ಅವರು ಅಗ್ರ ಕ್ರಮಾಂಕದಲ್ಲಿ ಮುಂದುವರಿದಿದ್ದು, ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ಗಳಿಗೆ ಆರು ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್ ಅವರು ಶ್ರೇಯಾಂಕದಲ್ಲಿ ಅದ್ಭುತ ಭಡ್ತಿ ಪಡೆದಿದ್ದಾರೆ. 30ನೇ ಸ್ಥಾನದಲ್ಲಿದ್ದ ಸಿರಾಜ್ ಇದೀಗ 17 ರ್ಯಾಂಕ್ ಗೆ ಏರಿದ್ದಾರೆ.
ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಜಸ್ಪ್ರೀತ್ ಬುಮ್ರಾ ಕೂಡಾ ಒಂದು ಸ್ಥಾನ ಮೇಲೆರಿ ಸ್ಥಾನಕ್ಕೇರಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ರವೀಂದ್ರ ಜಡೇಜಾ ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ರವಿ ಅಶ್ವಿನ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.