ದುಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ನಿರಶಾದಾಯಕ ಪ್ರದರ್ಶನ ನೀಡುತ್ತಿರುವ ಶ್ರೀಲಂಕಾ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ), ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸದಸ್ಯತ್ವವನ್ನು ರದ್ದು ಮಾಡಿದೆ.
ವಿಶ್ವಕಪ್ ನಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನ ನೀಡಿದ್ದರಿಂದ ಸಿಟ್ಟಾಗಿದ್ದ ಅಲ್ಲಿನ ಕ್ರೀಡಾಸಚಿವ; ಇಡೀ ಕ್ರಿಕೆಟ್ ಮಂಡಳಿಯನ್ನೇ ವಿಸರ್ಜನೆ ಮಾಡಿದ್ದರು. ನಂತರ ಅಲ್ಲಿನ ನ್ಯಾಯಾಲಯ ಮಂಡಳಿಯನ್ನು ಪುನಃಸ್ಥಾಪನೆ ಮಾಡಿತ್ತು. ಈ ಎಲ್ಲ ಪ್ರಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಶುಕ್ರವಾರ ಸಭೆ ನಡೆಸಿ ಶ್ರೀಲಂಕಾದ ಸದಸ್ಯತ್ವವನ್ನು ರದ್ದು ಮಾಡಿದೆ. ಐಸಿಸಿ ನಿಯಮಗಳ ಪ್ರಕಾರ ಅದರ ಅಂಗಸಂಸ್ಥೆಗಳಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೆ ಮಾಡಿದರೆ ಆ ಸಂಸ್ಥೆಗಳ ಸದಸ್ಯತ್ವವನ್ನೇ ಇಲ್ಲ ಮಾಡುತ್ತದೆ.
ಇನ್ನೀಗ ಶ್ರೀಲಂಕಾ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಯಾವಾಗ ಐಸಿಸಿಗೆ ಸರ್ಕಾರದ ಪ್ರಭಾವ ಇಲ್ಲವಾಗಿದೆ ಎನಿಸುತ್ತದೋ, ಆಗಲೇ ಲಂಕಾಕ್ಕೆ ಮತ್ತೆ ಮಾನ್ಯತೆ ಸಿಗಲಿದೆ. ಈಗಾಗಲೇ ತೀವ್ರ ಹೊಡೆತ ತಿಂದಿರುವ ಲಂಕಾಕ್ಕೆ ಇದು ಮತ್ತೂಂದು ಹೊಡೆತವಾಗಿದೆ.
ಶ್ರೀಲಂಕಾ ಅಧ್ಯಕ್ಷ ಶಮ್ಮಿ ಅವರೇ ಮಂಡಳಿಯನ್ನು ಅಮಾನತುಗೊಳಿಸುವಂತೆ ಐಸಿಸಿಗೆ ಕೇಳಿಕೊಂಡರು ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ. ಐಸಿಸಿ ಮಂಡಳಿಯು ಶುಕ್ರವಾರ (ನವೆಂಬರ್ 10) ಆನ್‌ಲೈನ್‌ನಲ್ಲಿ ಸಭೆ ಸೇರಿ ಶ್ರೀಲಂಕಾ ಕ್ರಿಕೆಟ್‌ನ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಕುರಿತು ಚರ್ಚಿಸಿತ್ತು. ವಿಶ್ವಕಪ್ ಪ್ರಯುಕ್ತ ಶಮ್ಮಿ ಭಾರತದಲ್ಲಿದ್ದಾರೆ. ಐಸಿಸಿ ಅವರನ್ನು ಅಧ್ಯಕ್ಷರನ್ನಾಗಿ ಗುರುತಿಸುವುದನ್ನು ಮುಂದುವರಿಸಿದೆ. ವಿಶ್ವಕಪ್ ಮುಗಿದ ನಂತರ ಅಹಮದಾಬಾದ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಶಮ್ಮಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಅಮಾನತುಗೊಂಡಿರುವ ಐಸಿಸಿಯ ಎರಡನೇ ಪೂರ್ಣ ಸದಸ್ಯ ತಂಡ ಶ್ರೀಲಂಕಾ. ಹಸ್ತಕ್ಷೇಪದ ಕಾರಣಕ್ಕಾಗಿಯೇ ಜಿಂಬಾಬ್ವೆಯನ್ನು 2019 ರಲ್ಲಿ ಅಮಾನತುಗೊಳಿಸಲಾಗಿತ್ತು. ಐಸಿಸಿ ಶ್ರೀಲಂಕಾದ ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಇನ್ನೂ ಘೋಷಿಸಿಲ್ಲ, ಅದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳುತ್ತದೆ.
ಶ್ರೀಲಂಕಾವು ಡಿಸೆಂಬರ್ ವರೆಗೆ ಯಾವುದೇ ಕ್ರಿಕೆಟ್ ಪಂದ್ಯವನ್ನು ಹೊಂದಿಲ್ಲ. ಈ ವರ್ಷವೂ ಅವರು ಐಸಿಸಿಯಿಂದ ಯಾವುದೇ ಹಣವನ್ನು ಸ್ವೀಕರಿಸಲಿಲ್ಲ. ಮುಂದಿನ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ಐಸಿಸಿ ಪುರುಷರ U19 ಕ್ರಿಕೆಟ್ ವಿಶ್ವಕಪ್ ಅನ್ನು ಶ್ರೀಲಂಕಾ ಆಯೋಜಿಸುತ್ತದೆ.