Advertisement

ICC; ಟು-ಟೈರ್‌ ಟೆಸ್ಟ್‌  ನಿಯಮಕ್ಕೆ ಸಿದ್ಧತೆ? ಏನಿದು ಸಿಸ್ಟಮ್‌?

11:24 PM Jan 06, 2025 | Team Udayavani |

ದುಬಾೖ: ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗಳ ಜತೆ ಸೇರಿ, ಟು-ಟೈರ್‌ (ಎರಡು ಸ್ಥರ) ಟೆಸ್ಟ್‌ ನಿಯಮ ತರಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಚಿಂತನೆ ನಡೆಸು ತ್ತಿದೆ. ದೊಡ್ಡ ಸಂಖ್ಯೆಯ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್‌ ದೈತ್ಯ ರಾಷ್ಟ್ರಗಳ ಮಧ್ಯೆ ಟೆಸ್ಟ್‌ ಸರಣಿಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ಯೋಚಿಸುತ್ತಿದೆ ಎಂದು ವರದಿಯಾಗಿದೆ.

Advertisement

ಐಸಿಸಿಯ ನೂತನ ಅಧ್ಯಕ್ಷ ಜಯ್‌ ಶಾ, ಟು-ಟೈರ್‌ ಟೆಸ್ಟ್‌ ನಿಯಮದ ವಿಚಾರವಾಗಿಯೇ ಕ್ರಿಕೆಟ್‌ ಆಸ್ಟ್ರೇಲಿಯ (ಸಿಎ) ಅಧ್ಯಕ್ಷ ಮೈಕ್‌ ಬೈರ್ಡ್‌, ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ನ (ಇಸಿಬಿ) ರಿಚರ್ಡ್‌ ಥಾಮ್ಸನ್‌ ಅವರನ್ನು ಈ ತಿಂಗಳಾಂತ್ಯದಲ್ಲಿ ಭೇಟಿ ಮಾಡಲಿದ್ದಾರೆ. ಈ ವೇಳೆ ಚರ್ಚಿಸಿ ಹೊಸ ನಿಯಮದ ಬಗ್ಗೆ ನಿರ್ಧಾರಿಸಲಿದ್ದಾರೆ ಎನ್ನಲಾಗಿದೆ.

2027ರ ಬಳಿಕ ನಿಯಮ ಜಾರಿ?
ಸದ್ಯ 2027ರ ವರೆಗೆ ಚಾಲ್ತಿಯಲ್ಲಿರುವ ಕ್ರಿಕೆಟ್‌ ವೇಳಾಪಟ್ಟಿ ಮುಕ್ತಾಯದ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡು ಸ್ಥರ ನಿಯಮ ಜಾರಿಗೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆಗೆ ಸಂಬಂಧಿಸಿ ಪ್ರತಿಕ್ರಿಯಿ ಸಿರುವ ಬಿಸಿಸಿಐ, ಅಂಥ ಬದಲಾವಣೆಯ ಬಗ್ಗೆ ನಮಗೇನೂ ಸುದ್ದಿ ಬಂದಿಲ್ಲ. ಸದ್ಯ ನಾವೀಗ ಜ. 12ರಂದು ಮುಂಬಯಿಯಲ್ಲಿ ನಡೆಯುವ ಬಿಸಿಸಿಐ ವಿಶೇಷ ಸಭೆಗೆ ಸಿದ್ಧತೆ ನಡೆಸುತ್ತಿದ್ದೇವೆ. ಸಭೆಯಲ್ಲಿ ಇತ್ತೀಚೆಗಷ್ಟೇ ಮುಗಿದ ಆಸ್ಟ್ರೇಲಿಯ ಪ್ರವಾಸದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದಿದೆ.

ಏನಿದು ಟು-ಟೈರ್‌ ಟೆಸ್ಟ್‌ ಸಿಸ್ಟಮ್‌?
ಟು-ಟೈರ್‌ ಟೆಸ್ಟ್‌ ಸಿಸ್ಟಮ್‌ ಅಥವಾ ಎರಡು ಸ್ಥರ ಟೆಸ್ಟ್‌ ನಿಯಮದ ಬಗೆಗಿನ ಚರ್ಚೆ ಹೊಸದೇನೂ ಅಲ್ಲ. 2016ರಿಂದಲೇ ಇಂಥದ್ದೊಂದು ನಿಯಮ ರೂಪಿಸುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ನಿಯಮ ಜಾರಿಯಾದರೆ, ಟೆಸ್ಟ್‌ ಕ್ರಿಕೆಟ್‌ಗೆ ದೊಡ್ಡ ಮಟ್ಟದ ವೀಕ್ಷಕರಿರುವ ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ನ‌ಂಥ ಬಲಿಷ್ಠ ದೇಶಗಳು ಆಡುವ ಟೆಸ್ಟ್‌ ಸರಣಿಗಳ ಸಂಖ್ಯೆ ಹೆಚ್ಚಾಗಲಿದೆ.

ಟು-ಟೈರ್‌ ಟೆಸ್ಟ್‌ ನಿಯಮಕ್ಕೆ ಒಂದನೇ ಸ್ಥರದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ, ಭಾರತ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ ಮತ್ತು ಶ್ರೀಲಂಕಾ ದೇಶಗಳಿವೆ. 2ನೇ ಸ್ಥರದ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ, ಜಿಂಬಾಬ್ವೆ, ಐರ್ಲೆಂಡ್‌ ಮತ್ತು ಅಫ್ಘಾನಿಸ್ಥಾನ ತಂಡಗಳಿವೆ.
2016ರಲ್ಲಿ ಈ ನಿಯಮದ ಕುರಿತು ಮಾತುಗಳು ಕೇಳಿಬಂದಾಗ, ಬಿಸಿಸಿಐ ಸೇರಿ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗಳು ವಿರೋಧಿಸಿದ್ದವು. ಈ ನಿಯಮದಿಂದ ಸಣ್ಣ ರಾಷ್ಟ್ರಗಳಿಗೆ ಅವಕಾಶಗಳು ಕಡಿಮೆಯಾಗಿ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎನ್ನುವ ಆತಂಕ ಈ ದೇಶಗಳದ್ದಾಗಿತ್ತು. ಆದರೆ ಬಳಿಕ ಭಾರತದಲ್ಲಿ ಕ್ರಿಕೆಟ್‌ ದೊಡ್ಡಮಟ್ಟದಲ್ಲಿ ಜನಪ್ರಿಯಗೊಂಡು, ಈಗ ಬಿಸಿಸಿಐ ಕೂಡ ಟು-ಟೈರ್‌ ನಿಯಮಕ್ಕೆ ಹಸಿರು ನಿಶಾನೆ ನೀಡಲು ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next