Advertisement

ದಶಕದ ಶ್ರೇಷ್ಠ ಕ್ರಿಕೆಟಿಗ ಸ್ಪರ್ಧೆಯಲ್ಲಿ ಕೊಹ್ಲಿ, ಅಶ್ವಿ‌ನ್‌

10:49 PM Nov 24, 2020 | mahesh |

ದುಬಾೖ: ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಪ್ರತಿಷ್ಠಿತ ದಶಕದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಸ್ಪರ್ಧೆಗೆ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ. ಕಳೆದೊಂದು ದಶಕದಲ್ಲಿ ಕ್ರಿಕೆಟ್‌ ರಂಗದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಕೊಹ್ಲಿ ಅವರು ಐಸಿಸಿ ಪ್ರಶಸ್ತಿಯ ಎಲ್ಲ ಐದು ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ. ಪ್ರತಿಯೋರ್ವ ಆಟಗಾರರು ಪಡೆಯುವ ಮತಗಳ ಆಧಾರದಲ್ಲಿ ಅಂತಿಮ ವಿಜೇತರನ್ನು ನಿರ್ಧರಿಸಲಾಗುತ್ತದೆ.

Advertisement

ಐಸಿಸಿ ದಶಕದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಸ್ಪರ್ಧೆಯಲ್ಲಿ ಕೊಹ್ಲಿ ಮತ್ತು ಅಶ್ವಿ‌ನ್‌ ಅವರಲ್ಲದೇ ಇಂಗ್ಲೆಂಡಿನ ಜೋ ರೂಟ್‌, ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌, ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌, ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕರ ಇದ್ದಾರೆ.

ದಶಕದ ಶ್ರೇಷ್ಠ ಏಕದಿನ ಕ್ರಿಕೆಟಿಗ ಪ್ರಶಸ್ತಿ ಸ್ಪರ್ಧೆಯಲ್ಲಿ ಕೊಹ್ಲಿ ಅವರಲ್ಲದೇ ಭಾರತದ ಮಾಜಿ ನಾಯಕ ಎಂಎಸ್‌ ಧೋನಿ ಮತ್ತು ರನ್‌ ಮೆಷಿನ್‌ ರೋಹಿತ್‌ ಶರ್ಮ ಇದ್ದಾರೆ. ಈ ಮೂವರಲ್ಲದೇ ಶ್ರೀಲಂಕಾದ ಲಸಿತ ಮಾಲಿಂಗ, ಕುಮಾರ ಸಂಗಕ್ಕರ, ಆಸ್ಟ್ರೇಲಿಯದ ಮಿಚೆಲ್‌ ಸ್ಟಾರ್ಕ್‌ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ ಸ್ಪರ್ಧೆಯಲ್ಲಿದ್ದಾರೆ.

ಕೊಹ್ಲಿ ಮತ್ತು ರೋಹಿತ್‌ ಅವರು ದಶಕದ ಶ್ರೇಷ್ಠ ಟಿ20 ಕ್ರಿಕೆಟಿಗ ಪ್ರಶಸ್ತಿಗಾಗಿ ಅಫ್ಘಾನಿಸ್ಥಾನದ ರಶೀದ್‌ ಖಾನ್‌, ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌, ಆಸ್ಟ್ರೇಲಿಯದ ಆರನ್‌ ಫಿಂಚ್‌, ಶ್ರೀಲಂಕಾದ ಮಾಲಿಂಗ ಮತ್ತು ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌ ಜತೆ ಸ್ಪರ್ಧಿಸಲಿದ್ದಾರೆ.

ಕೊಹ್ಲಿ ಇನ್ನೆರಡು ಪ್ರಶಸ್ತಿಗಳಾದ ದಶಕದ ಶ್ರೇಷ್ಠ ಟೆಸ್ಟ್‌ ಕ್ರಿಕೆಟಿಗ ಮತ್ತು ದಶಕದ ಐಸಿಸಿ ಸ್ಪಿರಿಟ್‌ ಆಫ್ ಕ್ರಿಕೆಟ್‌ ಪ್ರಶಸ್ತಿ ಸ್ಪರ್ಧೆಯಲ್ಲೂ ಇದ್ದಾರೆ. ಸ್ಪಿರಿಟ್‌ ಆಫ್ ಕ್ರಿಕೆಟ್‌ ಪ್ರಶಸ್ತಿಗಾಗಿ ಧೋನಿ ಕೂಡ ಕಣದಲ್ಲಿದ್ದಾರೆ.

Advertisement

ವಿರಾಟ್‌ ಕೊಹ್ಲಿ ಸಾಧನೆ
ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಗಳಿಸುತ್ತಿರುವ ಕೊಹ್ಲಿ ಅವರು ಈಗಾಗಲೇ 70 ಶತಕ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್‌ (71) ಮತ್ತು ಸಚಿನ್‌ ತೆಂಡುಲ್ಕರ್‌ 100 ಶತಕ ದಾಖಲಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಗರಿಷ್ಠ ರನ್‌ ಪೇರಿಸಿದ ಸಾಧಕರಲ್ಲಿಯೂ ಕೊಹ್ಲಿ (21,444) ಮೂರನೇ ಸ್ಥಾನದಲ್ಲಿ (ಪಾಂಟಿಂಗ್‌ 27,483 ಮತ್ತು ತೆಂಡುಲ್ಕರ್‌ 34,357) ಇದ್ದಾರೆ. ಕಳೆದೊಂದು ದಶಕದಲ್ಲಿ ಕೊಹ್ಲಿ ಅವರು ಟೆಸ್ಟ್‌ನಲ್ಲಿ 7 ಸಾವಿರಕ್ಕಿಂತ ಹೆಚ್ಚಿನ ರನ್‌ ಗಳಿಸಿದ್ದರೆ ಏಕದಿನದಲ್ಲಿ 11 ಸಾವಿರ ಮತ್ತು ಟಿ20ಯಲ್ಲಿ 2,600 ರನ್‌ ಗಳಿಸಿದ್ದಾರೆ.

ಐಸಿಸಿ ದಶಕದ ಕ್ರಿಕೆಟ್‌ ಪ್ರಶಸ್ತಿಗೆ ನಾಮನಿರ್ದೇಶನ

ದಶಕದ ಶ್ರೇಷ್ಠ ಆಟಗಾರ: ವಿರಾಟ್‌ ಕೊಹ್ಲಿ, ಆರ್‌. ಅಶ್ವಿ‌ನ್‌, ಜೋ ರೂಟ್‌, ಕೇನ್‌ ವಿಲಿಯಮ್ಸನ್‌, ಸ್ಟೀವನ್‌ ಸ್ಮಿತ್‌, ಎಬಿ ಡಿ ವಿಲಿಯರ್, ಕುಮಾರ ಸಂಗಕ್ಕರ.

ದಶಕದ ಶ್ರೇಷ್ಠ ಆಟಗಾರ್ತಿ: ಎಲ್ಲಿಸ್‌ ಪೆರ್ರಿ, ಮೆಗ್‌ ಲ್ಯಾನಿಂಗ್‌, ಸುಝೀ ಬೇಟ್ಸ್‌, ಸ್ಟಫಾನಿ ಟೇಲರ್‌, ಮಿಥಾಲಿ ರಾಜ್‌, ಸಾರಾ ಟೇಲರ್‌.

ದಶಕದ ಶ್ರೇಷ್ಠ ಏಕದಿನ ಆಟಗಾರ: ವಿರಾಟ್‌ ಕೊಹ್ಲಿ. ಲಸಿತ ಮಾಲಿಂಗ, ಮಿಚೆಲ್‌ ಸ್ಟಾರ್ಕ್‌, ಎಬಿ ಡಿ ವಿಲಿಯರ್, ರೋಹಿತ್‌ ಶರ್ಮ, ಎಂ.ಎಸ್‌. ಧೋನಿ, ಕುಮಾರ ಸಂಗಕ್ಕರ.

ದಶಕದ ಶ್ರೇಷ್ಠ ಏಕದಿನ ಆಟಗಾರ್ತಿ: ಮೆಗ್‌ ಲ್ಯಾನಿಂಗ್‌, ಎಲ್ಲಿಸ್‌ ಪೆರ್ರಿ, ಮಿಥಾಲಿ ರಾಜ್‌, ಸುಝೀ ಬೇಟ್ಸ್‌, ಸ್ಟಫಾನಿ ಟೇಲರ್‌, ಜೂಲನ್‌ ಗೋಸ್ವಾಮಿ.

ದಶಕದ ಶ್ರೇಷ್ಠ ಟೆಸ್ಟ್‌ ಕ್ರಿಕೆಟಿಗ: ವಿರಾಟ್‌ ಕೊಹ್ಲಿ, ಕೇನ್‌ ವಿಲಿಯಮ್ಸನ್‌, ಸ್ಟೀವನ್‌ ಸ್ಮಿತ್‌, ಜೇಮ್ಸ್‌ ಆ್ಯಂಡರ್ಸನ್‌, ರಂಗನ ಹೆರಾತ್‌, ಯಾಸಿರ್‌ ಶಾ.

ದಶಕದ ಟಿ20 ಕ್ರಿಕೆಟಿಗ: ರಶೀದ್‌ ಖಾನ್‌, ವಿರಾಟ್‌ ಕೊಹ್ಲಿ, ಇಮ್ರಾನ್‌ ತಾಹಿರ್‌, ಆರನ್‌ ಫಿಂಚ್‌, ಲಸಿತ ಮಾಲಿಂಗ, ಕ್ರಿಸ್‌ ಗೇಲ್‌, ರೋಹಿತ್‌ ಶರ್ಮ.

ದಶಕದ ಸ್ಪಿರಿಟ್‌ ಆಫ್‌ ಕ್ರಿಕೆಟ್‌ ಅವಾರ್ಡ್‌: ವಿರಾಟ್‌ ಕೊಹ್ಲಿ, ಕೇನ್‌ ವಿಲಿಯಮ್ಸನ್‌, ಬ್ರೆಂಡನ್‌ ಮೆಕಲಮ್‌, ಮಿಸ್ಬಾ ಉಲ್‌ ಹಕ್‌, ಎಂ.ಎಸ್‌. ಧೋನಿ, ಅನ್ಯಾ ಶ್ರಬ್ರೂಲ್‌, ಕ್ಯಾಥರಿನ್‌ ಬ್ರಂಟ್‌, ಮಾಹೇಲ ಜಯವರ್ಧನ, ಡೇನಿಯಲ್‌ ವೆಟರಿ.

ಕಳೆದೊಂದು ದಶಕದಲ್ಲಿ ಕ್ರಿಕೆಟ್‌ ರಂಗದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ, ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಪ್ರತಿಷ್ಠಿತ ದಶಕದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಸ್ಪರ್ಧೆಗೆ ನನ್ನ ಹೆಸರನ್ನು ನಾಮನಿರ್ದೇಶನ ಮಾಡಿರುವುದು ಅತೀವ ಸಂತಸ ತಂದಿದೆ.
-ವಿರಾಟ್‌ ಕೊಹ್ಲಿ. ಭಾರತ ಕ್ರಿಕೆಟ್‌ ತಂಡದ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next