ದುಬೈ: ಟಿ- ಟ್ವೆಂಟಿ, ಏಕದಿನ ವಿಶ್ವಕಪ್ ಆಯಿತು. ಐಸಿಸಿ ಆಯೋಜನೆಯ ಕೂಟಗಳಿಗೆ ಈಗ ಹೊಸತೊಂದು ಸೇರ್ಪಡೆಯಾಗಿದೆ. ಅದುವೇ ಟೆಸ್ಟ್ ಚಾಂಪಿಯನ್ ಶಿಪ್.
ಆಗಸ್ಟ್ ಒಂದರಿಂದ ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಲಿದೆ. 9 ತಂಡಗಳು ಭಾಗವಹಿಸಲಿದ್ದು, 27 ಸರಣಿಗಳಲ್ಲಿ ಒಟ್ಟು 71 ಪಂದ್ಯಗಳು ನಡೆಯಲಿದೆ ಎಂದು ಐಸಿಸಿ ಸೋಮವಾರ ಅಧಿಕೃತವಾಗಿಪ್ರಕಟಿಸಿದೆ.
ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ತಂಡಗಳು ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಸೆಣಸಾಡಲಿವೆ.
ಎರಡು ವರ್ಷಗಳ ನಂತರ ಅಂದರೆ ಜೂನ್ 2021ರಲ್ಲಿ ಇಂಗ್ಲೆಂಡ್ ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ನಡೆಯಲಿದೆ. ಕೂಟದಲ್ಲಿ ಅಗ್ರ ಸ್ಥಾನ ಅಲಂಕರಿಸಿದ ಮೊದಲೆರಡು ತಂಡಗಲು ಫೈನಲ್ ಪಂದ್ಯವಾಡಲಿದೆ.
ಆಗಸ್ಟ್ ಒಂದರಿಂದ ಆರಂಭವಾಗಲಿರುವ ಇಂಗ್ಲೆಂಡ್ ಮತ್ತು ಆಸೀಸ್ ನಡುವಿನ ಆಶಸ್ ಸರಣಿಯೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯ ಆಗಸ್ಟ್ 22ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.