ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ವಾರ್ಷಿಕ ಪರಿಷ್ಕರಣೆ ಮಾಡಿದ್ದು, ಪರಿಣಾಮವಾಗಿ ಮೊದಲ ಸ್ಥಾನದಲ್ಲಿದ್ದ ಭಾರತ ತಂಡವು ಎರಡನೇ ಸ್ಥಾನಕ್ಕೆ ಜಾರಿದೆ.
ಎರಡನೇ ಸ್ಥಾನದಲ್ಲಿದ್ದ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನಕ್ಕೇರಿದೆ.
ಐಸಿಸಿ ಶುಕ್ರವಾರ ತಮ್ಮ ವಾರ್ಷಿಕ ತಂಡ ಶ್ರೇಯಾಂಕಗಳನ್ನು ನವೀಕರಿಸಿದ್ದು, ಕಳೆದ ವರ್ಷ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಭಾರತದ ವಿರುದ್ಧ 209 ರನ್‌ಗಳ ಅದ್ಭುತ ವಿಜಯದ ಹಿನ್ನೆಲೆಯಲ್ಲಿ ಪ್ಯಾಟ್ ಕಮಿನ್ಸ್ ತಂಡವು ಅಗ್ರಸ್ಥಾನಕ್ಕೆ ಏರಿದೆ.
ಶ್ರೇಯಾಂಕಗಳ ನವೀಕರಣವು ಮೇ 2021 ರ ನಂತರ ತಂಡಗಳ ಪ್ರದರ್ಶನಗಳನ್ನು ಪರಿಗಣಿಸುತ್ತದೆ.
ಸದ್ಯ ಆಸ್ಟ್ರೇಲಿಯಾ 124 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಭಾರತವು 120 ಅಂಕಗಳನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವು 105 ಅಂಕಗಳನ್ನು ಹೊಂದಿದೆ.
ನವೀಕರಣದಿಂದ ಅಗ್ರ ಎರಡು ಸ್ಥಾನಗಳಲ್ಲಿ ಮಾತ್ರ ಬದಲಾವಣೆಯಾಗಿದೆ. ಉಳಿದಂತೆ ದಕ್ಷಿಣ ಆಫ್ರಿಕಾ (103), ನ್ಯೂಜಿಲೆಂಡ್ (96), ಪಾಕಿಸ್ತಾನ (89), ಶ್ರೀಲಂಕಾ (83), ವೆಸ್ಟ್ ಇಂಡೀಸ್ (82) ಮತ್ತು ಬಾಂಗ್ಲಾದೇಶ (53) ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.