Advertisement

Super 8; ಮೊದಲ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಭಾರತ ಜಯಭೇರಿ

11:39 PM Jun 20, 2024 | Team Udayavani |

ಬ್ರಿಜ್‌ಟೌನ್‌: ಟಿ20 ವಿಶ್ವಕಪ್‌ನ ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ
47 ರನ್ ಗಳ ಭರ್ಜರಿ ಜಯ ಸಾಧಿಸಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕ, ಹಾರ್ದಿಕ್ ಪಂದ್ಯ ಅವರ 32 ರನ್ ನೆರವಿನಿಂದ ಭಾರತೀಯ ತಂಡವುಎಂಟು ವಿಕೆಟಿಗೆ 181 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಅಫ್ಘಾನ್ 20 ಓವರ್ ಗಳಲ್ಲಿ 134 ರನ್ ಗಳಿಗೆ ಆಲೌಟಾಯಿತು. ಅಜ್ಮತುಲ್ಲಾ ಒಮರ್ಜಾಯ್ 26 ರನ್ ಗರಿಷ್ಠ ಗಳಿಕೆ.

ಬುಮ್ರಾ ಬಿಗಿ ದಾಳಿ ನಡೆಸಿದ ಬುಮ್ರಾ 3 ವಿಕೆಟ್ ಕಬಳಿಸಿದರು(4-1-7-3). ಅರ್ಶದೀಪ್ ಕೂಡ ದುಬಾರಿ ಎನಿಸಿದರೂ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2, ಜಡೇಜ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ನಾಯಕ ರೋಹಿತ್‌ ಶರ್ಮ ಔಟಾದ ಬಳಿಕ ವಿರಾಟ್‌ ಕೊಹ್ಲಿ ಮತ್ತು ರಿಷಭ್‌ ಪಂತ್‌ ಎಚ್ಚರಿಕೆಯಿಂದ ಆಡಿದರು. ಇವರಿಬ್ಬರು ದ್ವಿತೀಯ ವಿಕೆಟಿಗೆ 43 ರನ್‌ ಪೇರಿಸಿ ಬೇರ್ಪಟ್ಟರು. 20 ರನ್‌ ಗಳಿಸಿದ ರಿಷಭ್‌ ಅವರು ರಶೀದ್‌ಗೆ ವಿಕೆಟ್‌ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಕೊಹ್ಲಿ ಕೂಡ ಪೆವಿಲಿಯನ್‌ ಸೇರಿಕೊಂಡರು.

ಈ ನಡುವೆ ಸೂರ್ಯಕುಮಾರ್‌ ಯಾದವ್‌ ಅಫ್ಘಾನಿಸ್ಥಾನದ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರು ಹಾರ್ದಿಕ್‌ ಪಾಂಡ್ಯ ಜತೆ ಐದನೇ ವಿಕೆಟಿಗೆ 60 ರನ್‌ ಪೇರಿಸಿದರು. ರನ್‌ ಗಳಿಸಲು ಕಷ್ಟವಾಗುತ್ತಿದ್ದ ಈ ಪಿಚ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಸೂರ್ಯ 28 ಎಸೆತಗಳಿಂದ 53 ರನ್‌ ಗಳಿಸಿ ಐದನೆಯವರಾಗಿ ಔಟಾದರು. 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು.

Advertisement

ಬಿಗು ದಾಳಿ ಸಂಘಟಿಸಿದ ರಶೀದ್‌ ಖಾನ್‌ 26 ರನ್ನಿಗೆ ಮೂರು ವಿಕೆಟ್‌ ಉರುಳಿಸಿದರೆ ಫಾಜಲ್‌ಹಕ್‌ ಫಾರೂಖಿ 33 ರನ್ನಿಗೆ 3 ವಿಕೆಟ್‌ ಪಡೆದರು.

ಭಾರತೀಯ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವೇಗಿ ಮೊಹಮ್ಮದ್‌ ಸಿರಾಜ್‌ ಅವರ ಬದಲಿಗೆ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಅಫ್ಘಾನಿಸ್ಥಾನ ಕೂಡ ಒಂದು ಬದಲಾವಣೆ ಮಾಡಿದ್ದು ಕರೀಮ್‌ ಜನತ್‌ ಅವರ ಬದಲಿಗೆ ಹಜ್ರತುಲ್ಲ ಜಜಾರಿ ಅವರನ್ನು ಸೇರಿಸಿಕೊಂಡಿತ್ತು.

200 ಬೌಂಡರಿ ಸೂರ್ಯ ದಾಖಲೆ

ಟಿ20 ರ್‍ಯಾಂಕಿಂಗ್‌ನ ನಂ. 1 ಬ್ಯಾಟರ್‌, ಸೂರ್ಯಕುಮಾರ್‌ ಯಾದವ್‌, ಟಿ20 ಕ್ರಿಕೆಟ್‌ನಲ್ಲಿ 200 ಬೌಂಡರಿಗಳ ದಾಖಲೆ ನಿರ್ಮಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ 53 ರನ್‌ ಸಿಡಿಸುವ ಮೂಲಕ ಸೂರ್ಯ, ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ 64 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 200 ಬೌಂಡರಿಗಳ ಸಾಧನೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು ಬಾರಿಸಿರುವ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ಥಾನ ತಂಡದ ಬಾಬರ್‌ ಆಜಮ್‌, 123 ಪಂದ್ಯಗಳಲ್ಲಿ 440 ಬೌಂಡರಿ ಬಾರಿಸಿದ್ದಾರೆ. ದ್ವಿತೀಯ ಸ್ಥಾನಿ ಐರ್ಲೆಂಡ್‌ನ‌ ಪೌಲ್‌ ಸ್ಟರ್ಲಿಂಗ್‌, 418 ಬೌಂಡರಿ ಬಾರಿಸಿದ್ದರೆ, ತೃತೀಯ ಸ್ಥಾನಿ ಭಾರತದ ನಾಯಕ ರೋಹಿತ್‌ ಶರ್ಮ, 365 ಬೌಂಡರಿ ಬಾರಿಸಿದ್ದಾರೆ.

33 ವರ್ಷದ ಸೂರ್ಯಕುಮಾರ್‌, ಒಟ್ಟು 284 ಟಿ20 ಪಂದ್ಯಗಳಲ್ಲಿ 7,373 ರನ್‌ ಬಾರಿಸಿದ್ದಾರೆ. ಇದರಲ್ಲಿ 6 ಶತಕ, 50 ಅರ್ಧಶತಕಗಳು ಸೇರಿವೆ.

ಕಪ್ಪುಪಟ್ಟಿ ಧರಿಸಿ ಆಟ

ಗುರುವಾರ ನಿಧನ ಹೊಂದಿದ ಮಾಜಿ ವೇಗಿ ಡೇವಿಡ್‌ ಜಾನ್ಸನ್‌ ಅವರ ಗೌರವಾರ್ಥ ಭಾರತೀಯ ಕ್ರಿಕೆಟ್‌ ತಂಡದ ಸದಸ್ಯರು ಅಫ್ಘಾನಿಸ್ಥಾನ ತಂಡದೆದುರಿನ ಸೂಪರ್‌ 8 ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಆಟವಾಡಿದರು.

ಜಾನ್ಸನ್‌ ಅವರ ಗೌರವಾರ್ಥ ಭಾರತೀಯ ತಂಡದ ಸದಸ್ಯರು ಕಪ್ಪುಪಟ್ಟಿ ಧರಿಸಿ ಆಡಲಿದ್ದಾರೆ ಎಂದು ಪಂದ್ಯ ಆರಂಭಕ್ಕಿಂತ ಮೊದಲು ಭಾರತೀಯ ಕ್ರಿಕೆಟ್‌ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಸಚಿನ್‌ ತೆಂಡುಲ್ಕರ್‌, ವೆಂಕಟೇಶ್‌ ಪ್ರಸಾದ್‌, ಅನಿಲ್‌ ಕುಂಬ್ಳೆ ಸಹಿತ ಮಾಜಿ ಕ್ರಿಕೆಟಿಗರು ಜಾನ್ಸನ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next