Advertisement

T20 World Cup; ಲೋ ಸ್ಕೋರ್ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಜಯಭೇರಿ

01:14 AM Jun 10, 2024 | Team Udayavani |

ನ್ಯೂಯಾರ್ಕ್‌: ಟಿ20 ವಿಶ್ವಕಪ್‌ನ ರವಿವಾರದ ರೋಚಕ ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನದ ವಿರುದ್ಧ 6 ರನ್ ಗಳ ಜಯಭೇರಿ ಬಾರಿಸಿದೆ.

Advertisement

ಪಾಕಿಸ್ಥಾನದ ನಿಖರ ದಾಳಿ ಮತ್ತು ಮಳೆಯ ತೊಂದರೆಯಿಂದ ರನ್‌ ಗಳಿಸಲು ಬಹಳಷ್ಟು ಒದ್ದಾಡಿದ ಭಾರತ ತಂಡವು ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ ಪರದಾಡಿತು. 20 ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಮತ್ತೊಂದು ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ ಅಮೆರಿಕ ಎದುರು ಸೂಪರ್ ಓವರ್ ಪಂದ್ಯದಲ್ಲಿ ನಿರೀಕ್ಷೆಯೇ ಮಾಡದ ಸೋಲು ಅನುಭವಿಸಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಪಾಕ್ ಪರ ಗರಿಷ್ಟ ಸ್ಕೋರ್ . ಉಳಿದ ಯಾವ ಆಟಗಾರರಿಗೂ ಗೆಲುವಿನ ದಡ ತಲುಪಿಸುವುದು ಸಾಧ್ಯವಾಗಲಿಲ್ಲ.

ಬೌಲಿಂಗ್ ವೈಭವ

ಪಾಕ್ ಬ್ಯಾಟ್ಸ್ ಮ್ಯಾನ್ ಗಳನ್ನು ಭಾರತದ ಬೌಲರ್ ಗಳು ನಿಯಂತ್ರಿಸಿ ಗೆಲುವು ತನ್ನದಾಗಿಸಿಕೊಂಡರು. ಘಾತಕ ಬೌಲಿಂಗ್ ನಡೆಸಿದ ಬುಮ್ರಾ 14 ಕ್ಕೆ 3 ವಿಕೆಟ್ ಕಿತ್ತರು. ಪಂದ್ಯ ಶ್ರೇಷ್ಠ ಎನಿಸಿಕೊಂಡರು. ಹಾರ್ದಿಕ್ ಪಾಂಡ್ಯಾ 2, ಅಕ್ಷರ್ ಪಟೇಲ್ ಮತ್ತು ಅರ್ಶದೀಪ್ ಸಿಂಗ್ ತಲಾ 1 ವಿಕೆಟ್ ಕಿತ್ತರು.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತೀಯ ತಂಡ ಆರಂಭದಲ್ಲಿಯೇ ಹೊಡೆತ ಅನುಭವಿಸಿತು. ಹಿಟ್ಟರ್‌ಗಳಾದ ನಾಯಕ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಬೇಗನೇ ಔಟಾದ ಕಾರಣ ಭಾರತಕ್ಕೆ ಹೊಡೆತ ಬಿತ್ತು. ಈ ಕುಸಿತದಿಂದ ಸ್ವಲ್ಪಮಟ್ಟಿಗೆ ರಿಷಭ್‌ ಪಂತ್‌ ಮತ್ತು ಅಕ್ಷರ್‌ ಪಟೇಲ್‌ ಪಾರು ಮಾಡಿದರು. ಅವರಿಬ್ಬರು ಮೂರನೇ ವಿಕೆಟಿಗೆ 39 ರನ್‌ ಪೇರಿಸಿದರು. ಅಕ್ಷರ್‌ 20 ರನ್ನಿಗೆ ಔಟಾದರೆ ರಿಷಭ್‌ 42 ರನ್‌ ಗಳಿಸಿದರು. 31 ಎಸೆತ ಎದುರಿಸಿದ ಅವರು 6 ಬೌಂಡರಿ ಹೊಡೆದರು.

Advertisement

ಕೊನೆ ಹಂತದಲ್ಲಿಯೂ ಭಾರತದ ಯಾವುದೇ ಆಟಗಾರ ಸ್ಫೋಟಕವಾಗಿ ಆಡಲು ವಿಫ‌ಲವಾದ ಕಾರಣ ತಂಡ ಅಲ್ಪ ಮೊತ್ತಕ್ಕೆ ಆಲೌಟಾಯಿತು. ಬಿಗಿ ದಾಳಿ ಸಂಘಟಿಸಿದ ನಸೀಮ್‌ ಶಾ ಮತ್ತು ಹ್ಯಾರಿಸ್‌ ರವೂಫ್ ತಲಾ ಮೂರು ವಿಕೆಟ್‌ ಕಿತ್ತು ಭಾರತದ ಕುಸಿತಕ್ಕೆ ಕಾರಣರಾದರು.

ಪಂದ್ಯಕ್ಕೆ ಮಳೆ ತೊಂದರೆ
ಭಾರೀ ಮಳೆಯಿಂದ ಪಂದ್ಯ ಒಂದು ಗಂಟೆ ತಡವಾಗಿ ಆರಂಭಗೊಂಡಿತ್ತು. ಆದರೆ ಒಂದು ಓವರ್‌ ಮುಗಿದ ಬಳಿಕ ಮತ್ತೆ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಂಡಿದೆ. ಈ ವೇಳೆ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಯಾವುದೇ ವಿಕೆಟ್‌ ನಷ್ಟವಿಲ್ಲದೇ 8 ರನ್‌ ಗಳಿಸಿತ್ತು.

ಈ ಮೊದಲು ಟಾಸ್‌ ಗೆದ್ದ ಪಾಕಿಸ್ಥಾನ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧರಿಸಿತು. ಪಾಕಿಸ್ಥಾನ ಈ ಪಂದ್ಯಕ್ಕಾಗಿ ಅಜಮ್‌ ಖಾನ್‌ ಬದಲಿಗೆ ಇಮದ್‌ ವಸೀಮ್‌ ಅವರನ್ನು ಕರೆಸಿಕೊಂಡಿದೆ. ಭಾರತ ಕಳೆದ ಪಂದ್ಯದಲ್ಲಿ ಆಡಿದ ಬಳಗವನ್ನೇ ಉಳಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next