Advertisement

ಸರ್ವಾಂಗೀಣ ಆಟದ ಪ್ರದರ್ಶನ : ಭಾರತ ಸೆಮಿಫೈನಲಿಗೆ

12:56 AM Jun 12, 2017 | Karthik A |

ಲಂಡನ್‌: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಭಾರತ ತಂಡವು ರವಿವಾರ ನಡೆದ ನಿರ್ಣಾಯಕ ಹೋರಾಟದಲ್ಲಿ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಅಧಿಕಾರಯುತವಾಗಿ ಸೋಲಿಸಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲಿಗೇರಿತು. ಗುರುವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಶಿಸ್ತುಬದ್ಧವಾದ ಬೌಲಿಂಗ್‌ ನಿರ್ವಹಣೆಯ ಜತೆ ಅಮೋಘ ಫೀಲ್ಡಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತವು ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಮೇಲುಗೈ ಸಾಧಿಸಿ ಗೆಲುವಿನ ಸಂಭ್ರಮ ಆಚರಿಸಿತು. ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದರೂ ಭಾರತದ ನಿಖರ ದಾಳಿಗೆ ತುತ್ತಾಗಿ 44.3 ಓವರ್‌ಗಳಲ್ಲಿ 191 ರನ್ನಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಎಚ್ಚರಿಕೆಯ ಆಟವಾಡಿದ ಭಾರತವು ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಅವರ ಶತಕದ ಜತೆಯಾಟದಿಂದಾಗಿ 38 ಓವರ್‌ಗಳಲ್ಲಿಯೇ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. 

Advertisement

ಹರಿಣಗಳ ದಾಳಿಯನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದ ಧವನ್‌ ಮತ್ತು ಕೊಹ್ಲಿ ನಿಧಾನವಾಗಿ ರನ್‌ ಪೇರಿಸತೊಡಗಿದರು. ಮತ್ತೆ ಬಿರುಸಿನಿಂದ ಆಡಿ ರನ್‌ ವೇಗ ಹೆಚ್ಚಿಸಿದರು. ದ್ವಿತೀಯ ವಿಕೆಟಿಗೆ 128 ರನ್ನುಗಳ ಜತೆಯಾಟ ನಡೆಸಿ ಗೆಲುವು ಖಚಿತಪಡಿಸಿದರು. 83 ಎಸೆತ ಎದುರಿಸಿದ ಅವರು 12 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 78 ರನ್‌ ಗಳಿಸಿ ಔಟಾದರು. ಆಬಳಿಕ ಕೊಹ್ಲಿ ಮತ್ತು ಯುವರಾಜ್‌ ಬಿರುಸಿನ ಆಟವಾಡಿ ಬೇಗನೇ ಗೆಲುವು ಸಾರಿದರು. 101 ಎಸೆತ ಎದುರಿಸಿದ ಕೊಹ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 76 ರನ್‌ ಗಳಿಸಿ ಅಜೇಯರಾಗಿ ಉಳಿದರೆ ಯುವರಾಜ್‌ 25 ಎಸೆತಗಳಿಂದ 23 ರನ್‌ ಹೊಡೆದರು.

ಹಠಾತ್‌ ಕುಸಿತ


ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಕ್ವಿಂಟನ್‌ ಡಿ ಕಾಕ್‌ ಮತ್ತು ಹಾಶಿಮ್‌ ಆಮ್ಲ ಅವರು ತಾಳ್ಮೆಯಿಂದ ಆಡಿ 17.3 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 76 ರನ್‌ ಪೇರಿಸಿದರು. ಈ ಹಂತದಲ್ಲಿ 35 ರನ್‌ ಗಳಿಸಿದ ಆಮ್ಲ ಅವರು ಅಶ್ವಿ‌ನ್‌ಗೆ ಬಲಿಯಾದರು. ಕಾಕ್‌ ಮತ್ತು ಪ್ಲೆಸಿಸ್‌ ಕೂಡ ಉತ್ತಮ ಜತೆಯಾಟದ ಆಟಕ್ಕೆ ಪ್ರಯತ್ನಿಸಿದರು. ದ್ವಿತೀಯ ವಿಕೆಟಿಗೆ ಅವರಿಬ್ಬರು 40 ರನ್‌ ಒಟ್ಟುಗೂಡಿಸಿದರು. 

ವಿಶ್ವದ ನಂಬರ್‌ ವನ್‌ ತಂಡವೆನಿಸಿದ ದಕ್ಷಿಣ ಆಫ್ರಿಕಾ 51 ರನ್‌ ಅಂತರದಲ್ಲಿ ಅಂತಿಮ ಎಂಟು ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಒಂದು ಹಂತದಲ್ಲಿ ಒಂದು ವಿಕೆಟಿಗೆ 116 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾ 44.3 ಓವರ್‌ಗಳಲ್ಲಿ ಸರ್ವಪತನ ಕಂಡಿತು. ನಿರ್ಣಾಯಕ ಹಂತದಲ್ಲಿ ಕುಸಿಯುವ ಪರಿಪಾಠವನ್ನು ಇಲ್ಲಿಯೂ ಮುಂದುವರಿಸಿತು. ಆರು ಎಸೆತಗಳ ಅಂತರದಲ್ಲಿ ನಾಯಕ ಎಬಿ ಡಿ’ವಿಲಿಯರ್ ಮತ್ತು ಡೇವಿಡ್‌ ಮಿಲ್ಲರ್‌ ರನೌಟ್‌ ಆಗಿರುವುದು ತಂಡದ ಕುಸಿತಕ್ಕೆ ಪ್ರಮುಖ ಕಾರಣವಾಯಿತು. ಆ ಬಳಿಕ ಕುಸಿಯುತ್ತಲೇ ಹೋದ ತಂಡ 191 ರನ್ನಿಗೆ ಆಲೌಟಾಯಿತು. 141 ರನ್‌ ನೀಡದ ಎಸೆತ ಎಸೆದ ಭಾರತ ದಕ್ಷಿಣ ಆಫ್ರಿಕಾದ ರನ್‌ ಕುಸಿತಕ್ಕೆ ಕಾರಣವಾಯಿತು. ಇದು 23.3 ಮೇಡನ್‌ ಓವರ್‌ಗೆ ಸಮವಾಗಿದೆ. 11ರಿಂದ 40 ಓವರ್‌ ನಡುವಣ ದ್ವಿತೀಯ ಪವರ್‌ಪ್ಲೇ ವೇಳೆ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಲು ಯಶಸ್ವಿಯಾಯಿತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಆರು ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. 

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ

ಕ್ವಿಂಟನ್‌ ಡಿ ಕಾಕ್‌    ಬಿ ಜಡೇಜ    53
ಹಾಶಿಮ್‌ ಆಮ್ಲ    ಸಿ ಧೋನಿ ಬಿ ಅಶ್ವಿ‌ನ್‌    35
ಫಾ ಡು ಪ್ಲೆಸಿಸ್‌    ಬಿ ಪಾಂಡ್ಯ    36
ಎಬಿ ಡಿ’ವಿಲಿಯರ್    ರನೌಟ್‌    16
ಡೇವಿಡ್‌ ಮಿಲ್ಲರ್‌    ರನೌಟ್‌    1
ಜಿಪಿ ಡ್ಯುಮಿನಿ    ಔಟಾಗದೆ    20
ಕ್ರಿಸ್‌ ಮೊರಿಸ್‌    ಸಿ ಕುಮಾರ್‌ ಬಿ ಬುಮ್ರಾ    4
ಎ. ಪೆಹ್ಲುಕ್ವಾಯೊ    ಎಲ್‌ಬಿಡಬ್ಲ್ಯು ಬಿ ಬುಮ್ರಾ    4
ಕಾಗಿಸೊ ರಬಾಡ    ಸಿ ಧೋನಿ ಬಿ ಕುಮಾರ್‌    5
ಮಾರ್ನೆ ಮಾರ್ಕೆಲ್‌    ಸಿ ಕೊಹ್ಲಿ ಬಿ ಕುಮಾರ್‌    0
ಇಮ್ರಾನ್‌ ತಾಹಿರ್‌    ರನೌಟ್‌    1

Advertisement

ಇತರ:    16
ಒಟ್ಟು (44.3 ಓವರ್‌ಗಳಲ್ಲಿ ಆಲೌಟ್‌)    191

ವಿಕೆಟ್‌ ಪತನ: 1-76, 2-116, 3-140, 4-142, 5-157, 6-167, 7-178, 8-184, 9-184

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    7.3-0-23-2
ಜಸ್‌ಪ್ರೀತ್‌ ಬುಮ್ರಾ    8-0-28-2
ಆರ್‌. ಅಶ್ವಿ‌ನ್‌        9-0-43-1
ಹಾರ್ದಿಕ್‌ ಪಾಂಡ್ಯ        10-0-52-1
ರವೀಂದ್ರ ಜಡೇಜ        10-0-39-1

ಭಾರತ
ರೋಹಿತ್‌ ಶರ್ಮ    ಸಿ ಕಾಕ್‌ ಬಿ ಮಾರ್ಕೆಲ್‌    12
ಶಿಖರ್‌ ಧವನ್‌    ಸಿ ಪ್ಲೆಸಿಸ್‌ ಬಿ ತಾಹಿರ್‌    78
ವಿರಾಟ್‌ ಕೊಹ್ಲಿ    ಔಟಾಗದೆ    76
ಯುವರಾಜ್‌ ಸಿಂಗ್‌    ಔಟಾಗದೆ    23

ಇತರ:    4
ಒಟ್ಟು (38 ಓವರ್‌ಗಳಲ್ಲಿ 2 ವಿಕೆಟಿಗೆ)    193

ವಿಕೆಟ್‌ ಪತನ: 1-23, 2-151

ಬೌಲಿಂಗ್‌:
ಕಾಗಿಸೊ ರಬಾಡ        9-2-34-0
ಮಾರ್ನೆ ಮಾರ್ಕೆಲ್‌    7-1-38-1
ಆ್ಯಂಡಿಲೆ ಪೆಹ್ಲುಕ್ವಾಯೊ    5-0-25-0
ಕ್ರಿಸ್‌ ಮೊರಿಸ್‌        8-0-40-0
ಇಮ್ರಾನ್‌ ತಾಹಿರ್‌        6-0-37-1
ಜೀನ್‌ಪಾಲ್‌ ಡ್ಯುಮಿನಿ    3-0-17-0

ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ

Advertisement

Udayavani is now on Telegram. Click here to join our channel and stay updated with the latest news.

Next