ಕೋಲ್ಕತಾ : ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆಯುತ್ತಿರುವ ವಿಶ್ವಕಪ್ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯದ ಬಿಗಿ ದಾಳಿಗೆ ನಲುಗಿ ಭಾರೀ ಆಘಾತಕ್ಕೆ ಸಿಲುಕಿತಾದರೂ ಆಪದ್ಬಾಂಧವನಂತೆ ಡೇವಿಡ್ ಮಿಲ್ಲರ್ ಅವರು ಶತಕ ಸಿಡಿಸಿ ತಂಡ ಇನ್ನೂರರ ಗಡಿ ದಾಟಲು ನೆರವಾದರು.
24 ರನ್ ಆಗುವಷ್ಟರಲ್ಲಿ 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಮುಳುಗುವ ಹಂತಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ ತಂಡ ಬ್ಯಾಟ್ಸ್ ಮ್ಯಾನ್ ಗಳ ದಂಡೇ ಇರುವ ಆಸ್ಟ್ರೇಲಿಯಕ್ಕೆ 213 ರನ್ ಗಳ ಸಾಧಾರಣ ಗುರಿ ಮುಂದಿಟ್ಟಿದೆ.
ನಾಯಕ ಟೆಂಬಾ ಬವುಮಾ(0), ಕ್ವಿಂಟನ್ ಡಿ ಕಾಕ್(3) , ಐಡೆನ್ ಮಾರ್ಕ್ರಾಮ್(10), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್(6) ಅವರು ಬೇಗನೆ ನಿರ್ಗಮಿಸಿದರು. ಆಬಳಿಕ ಅಮೋಘ ಆಟವಾಡಿದ ಮಿಲ್ಲರ್ ಕೊನೆಯವರೆಗೂ ಕ್ರೀಸ್ ನಲ್ಲಿದ್ದು, ಶತಕದ ಸಂಭ್ರಮಾಚರಣೆ ಮಾಡಿ ನಿರ್ಗಮಿಸಿದರು. 116 ಎಸೆತಗಳಿಂದ 101 ರನ್ ಗಳಿಸಿದರು. 8ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಸಿಡಿಸಿದರು. ಮಿಲ್ಲರ್ ಗೆ ಸಾಥ್ ನೀಡಿದ ಹೆನ್ರಿಕ್ ಕ್ಲಾಸೆನ್ 47 ರನ್ ಗಳಿಸಿದ್ದ ವೇಳೆ ಬೌಲ್ಡ್ ಆದರು. ಜೆರಾಲ್ಡ್ ಕೋಟ್ಜೇ 19, ಕಗಿಸೊ ರಬಾಡ 10 ರನ್ ಗಳಿಸಿ ಔಟಾದರು. 49.4 ಓವರ್ ಗಳಲ್ಲಿ 212 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಬಿಗಿ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್, ನಾಯಕ ಪ್ಯಾಟ್ ಕಮ್ಮಿನ್ಸ್ ತಲಾ 3 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಕಿತ್ತರು.
3.12 ರ ವೇಳೆ ತುಂತುರು ಮಳೆ ಬಂದಿದ್ದು ಪಿಚ್ ಮೇಲೆ ಕವರ್‌ಗಳನ್ನು ಹಾಕಲಾಯಿತು. ದಕ್ಷಿಣ ಆಫ್ರಿಕಾ 44ಕ್ಕೆ 4 ವಿಕೆಟ್ ಕಳೆದುಕೊಂಡು ಹೆಣಗಾಡುತ್ತಿತ್ತು. ಆಟಗಾರರು ಪೆವಿಲಿಯನ್‌ಗೆ ಹಿಂತಿರುಗಿದರು. ಮಧ್ಯಾಹ್ನ 3:55ಕ್ಕೆ ಆಟವನ್ನು ಪುನರಾರಂಭಿಲಾಯಿತು.