ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಲೋಕವೇ ಕುತೂಹಲಕಾರಿಯಾಗಿ ಕಾಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಬಳಗ ಭಾರತವನ್ನು 240 ರನ್ ಗಳಿಗೆ ನಿಯಂತ್ರಿಸಿದೆ.
ಬ್ಯಾಟಿಂಗ್ ಬಲ ಹೊಂದಿರುವ ಆಸೀಸ್ ಗೆ ಗೆಲುವಿಗೆ 241 ರನ್ ಗುರಿ ನೀಡಲಾಗಿದ್ದು, ಈಗ ಪಂದ್ಯ ಸಂಪೂರ್ಣವಾಗಿ ಭಾರತದ ಬೌಲರ್ ಗಳ ಸಾಮರ್ಥ್ಯದ ಮೇಲೆ ನಿಂತಿದೆ.
ಆರಂಭದಲ್ಲಿ ನಾಯಕ ರೋಹಿತ್ ಶರ್ಮ ಅವರು ಅಬ್ಬರಿಸುತ್ತಿದ್ದ ವೇಳೆ ಶುಭಮಂ ಗಿಲ್ ಅವರು ತಂಡ 4.2 ಓವರ್ ಗಳಲ್ಲಿ 30 ರನ್ ಗಳಿಸಿದ್ದ ವೇಳೆ ಔಟಾಗಿ ಆಘಾತ ಅನುಭವಿಸಿತು. 4 ರನ್ ಗೆ ಗಿಲ್ ನಿರ್ಗಮಿಸಿದರು. ಆ ಬಳಿಕ ಶರ್ಮ 47 ರನ್ ಗಳಿಸಿ ವಿಶ್ವಾಸ ಮೂಡಿಸಿದ್ದ ವೇಳೆ ಆಘಾತಕಾರಿಯಾಗಿ ಔಟಾದರು. 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು. ಮ್ಯಾಕ್ಸ್‌ವೆಲ್ ಎಸೆದ ಚೆಂಡನ್ನು ರೋಹಿತ್ ದೊಡ್ಡ ಹೊಡೆತಕ್ಕೆ ಮುಂದಾದರು ಈ ವೇಳೆ ಹೆಡ್ ಅದ್ಬುತ ಕ್ಯಾಚ್ ಹಿಡಿದರು.
ಅದ್ಬುತ ಫಾರ್ಮ್ ನಲ್ಲಿದ್ದ ಶ್ರೇಯಸ್ ಅಯ್ಯರ್ 4 ರನ್ ಗೆ ಔಟಾಗಿ ನಿರಾಶರಾದರು. ಆಬಳಿಕ ತಾಳ್ಮೆಯ ಆಟವಾಡಿದ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ವೇಳೆ ದುರದೃಷ್ಟವೆಂಬಂತೆ ಔಟಾದರು. ಅವರು 4 ಬೌಂಡರಿಗಳನ್ನು ಬಾರಿಸಿದ್ದರು. ನಾಯಕ ಕಮ್ಮಿನ್ಸ್ ಎಸೆದ ಚೆಂಡು ಕೊಹ್ಲಿ ಅವರ ಬ್ಯಾಟ್ ಗೆ ತಗುಲಿ ವಿಕೆಟ್ ಗೆ ಅಪ್ಪಳಿಸಿತು.
ತಾಳ್ಮೆಯ ಆಟವಾಡಿದ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ಭರವಸೆ ಮೂಡಿಸಿದರು. ಆದರೆ ಸ್ಟಾರ್ಕ್ ಅವರು ಎಸೆದ ಚೆಂಡು ಕೀಪರ್ ಜೋಶ್ ಇಂಗ್ಲಿಸ್ ಅವರ ಕೈ ಸೇರಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಕೂಡ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.22 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಶಮಿ 6 ರನ್ ಗಳಿಸಿ ಔಟಾದರು.
ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಬುಮ್ರಾ 1 ರನ್ ಗೆ ಔಟಾದರು. ಕೊನೆಯ ಎಸೆತದಲ್ಲಿ ಕುಲದೀಪ್ ಯಾದವ್ 10 ರನ್ ಗಳಿಸಿದ್ದ ವೇಳೆ ರನ್ ಔಟಾದರು. ಮತ್ತು ಸಿರಾಜ್ 8 ರನ್ ಗಳಿಸಿ ಔಟಾಗದೆ ಉಳಿದರು. ಆಸೀಸ್ ಬಿಗಿ ದಾಳಿಯ ನಡುವೆಯೂ 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟಾಯಿತು.
ಆಸೀಸ್ ಪರ ಬಿಗಿ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್3, ಜೋಶ್ ಹ್ಯಾಜಲ್ವುಡ್2 , ಗ್ಲೆನ್ ಮ್ಯಾಕ್ಸ್ವೆಲ್ 1, ಪ್ಯಾಟ್ ಕಮ್ಮಿನ್ಸ್2 , ಆಡಮ್ ಝಂಪಾ 1 ವಿಕೆಟ್ ಪಡೆದರು.