Advertisement

World Cup ಜಿದ್ದಾಜಿದ್ದಿನ ಸೆಣಸಾಟ: ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

06:43 PM Oct 28, 2023 | Team Udayavani |

ಧರ್ಮಶಾಲಾ : ಇಲ್ಲಿ ಬಲಾಢ್ಯ ತಂಡಗಳ ನಡುವಿನ ಶನಿವಾರ ನಡೆದ ಜಿದ್ದಾಜಿದ್ದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಎಸೆತದ ವರೆಗೆ ಸಾಗಿದ ಪಂದ್ಯದಲ್ಲಿ 5 ರನ್ ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿ ಯಾಗಿದೆ.

Advertisement

ನ್ಯೂಜಿಲ್ಯಾಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ಅಬ್ಬರಿಸಿದ ಆಸೀಸ್ ಮೊದಲ ವಿಕೆಟ್ ಗೆ 175 ರನ್ ಗಳ ಜತೆಯಾಟವಾಡಿತು. ಟ್ರ್ಯಾವಿಸ್‌ ಹೆಡ್‌ ಸ್ಪೋಟಕ ಶತಕ ಸಿಡಿಸಿದರು.109(67 ಎಸೆತ) ರನ್ ಗಳಿಸಿ ಔಟಾದರು. ಡೇವಿಡ್‌ ವಾರ್ನರ್‌ 65 ಎಸೆತಗಳಲ್ಲಿ 81 ರನ್ ಗಳಿಸಿ ಔಟಾದರು.

ಮಿಚೆಲ್‌ ಮಾರ್ಷ್‌ 36, ,ಸ್ಟೀವನ್‌ ಸ್ಮಿತ್‌ 18, ಲಬು ಶೇನ್ 18, ಗ್ಲೆನ್‌ ಮ್ಯಾಕ್ಸ್‌ ವೆಲ್‌ 41, ನಾಯಕ ಪ್ಯಾಟ್‌ ಕಮಿನ್ಸ್‌ 37, ಜೋಶ್‌ ಇಂಗ್ಲಿಸ್‌ 38 ರನ್ ಕೊಡುಗೆ ಸಲ್ಲಿಸಿ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ನೆರವು ನೀಡಿದರು.

49.2 ಓವರ್ ಗಳಲ್ಲಿ 388 ರನ್ ಗಳಿಗೆ ಆಲೌಟಾಯಿತು. ಬೌಲ್ಟ್ ಮತ್ತು ಗ್ಲೆನ್‌ ಫಿಲಿಪ್ಸ್‌ ತಲಾ 3 ವಿಕೆಟ್ ಪಡೆದರು.ಸ್ಯಾಂಟ್ನರ್‌ 2 ಮತ್ತು ನೀಶಮ್‌ 1 ವಿಕೆಟ್ ಪಡೆದರು.

389 ರನ್ ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ 61 ರನ್ ಆಗುವಷ್ಟರಲ್ಲಿ ಮೊದಲ ಆಘಾತ ಅನುಭವಿಸಿತು. 28 ರನ್ ಗಳಿಸಿದ್ದ ಡೇವನ್‌ ಕಾನ್ವೇ ಔಟಾದರು.ವಿಲ್‌ಯಂಗ್‌ 32 ರನ್ ಗಳಿಸಿ ನಿರ್ಗಮಿಸಿದರು. ಆ ಬಳಿಕ ರಚಿನ್ ರವೀಂದ್ರ ಮತ್ತು ಡ್ಯಾರಿಲ್‌ ಮಿಚೆಲ್‌ ಭರ್ಜರಿ ಜತೆಯಾಟ ವಾಡಿದರು. ಮಿಚೆಲ್‌ 54 ರನ್ ಗಳಿಸಿ ಔಟಾದರು.

Advertisement

ರಚಿನ್ ದಾಖಲೆ
ವಿಶ್ವ ಕಪ್ ನ 6 ನೇ ಪಂದ್ಯದಲ್ಲಿ ರಚಿನ್ ರವೀಂದ್ರ 2 ನೇ ದಾಖಲೆಯ ಶತಕ ಬಾರಿಸಿದರು. ನ್ಯೂಜಿಲ್ಯಾಂಡ್ ಪರ ಇದು ವಿಶ್ವಕಪ್ ನ ಅತೀವೇಗದ ಶತಕವಾಗಿದೆ. 77 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಇಂಗ್ಲೆಂಡ್ ಎದುರು ರಚಿನ್ 82 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಕೊನೆಯ 6 ಎಸೆತಗಳಲ್ಲಿ 19 ರನ್ ಅಗತ್ಯವಿತ್ತು. ಜೇಮ್ಸ್ ನೀಶಮ್‌ ಮತ್ತು ಬೌಲ್ಟ್ ಕ್ರೀಸ್ ನಲ್ಲಿದ್ದರು. ಮಿಚೆಲ್ ಸ್ಟಾರ್ಕ್ ಎಸೆದ ಓವರ್ ನ 2 ನೇ ಚೆಂಡು ವೈಡ್ ಆಗಿ ಬೌಂಡರಿಗೆ ಹೋಯಿತು. 5 ರನ್ ಲಭ್ಯವಾಯಿತು. 3 ಎಸೆತಗಳಲ್ಲಿ 9 ರನ್ ಅಗತ್ಯವಿತ್ತು. 2 ಎಸೆತಗಳಲ್ಲಿ 7 ರನ್ ಬೇಕಾಯಿತು. 57 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದ ಜೇಮ್ಸ್ ನೀಶಮ್‌ ರನ್ ಔಟಾದರು. ಆಸ್ಟ್ರೇಲಿಯ ತಂಡ ಕೊನೆಯ ಓವರ್ ನಲ್ಲಿ ಅಮೋಘ ಫೀಲ್ಡಿಂಗ್ ಸಾಮರ್ಥ್ಯ ತೋರಿ ಗೆಲುವು ತನ್ನದಾಗಿಸಿಕೊಂಡಿತು. ಕೊನೆಯ ಎಸೆತದಲ್ಲಿ ಲಾಕಿ ಫರ್ಗುಸನ್ ಗೆ ಸಿಕ್ಸ್ ಬಾರಿಸುವುದು ಅಸಾಧ್ಯವಾಯಿತು. 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 383 ರನ್ ಗಳನ್ನು ಗಳಿಸಿ ವೀರೋಚಿತ ಸೋಲು ಅನುಭವಿಸಿತು.

ಆಸೀಸ್ ಪರ ಆ್ಯಡಂ ಝಂಪ 3 ವಿಕೆಟ್ ಪಡೆದರು. ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ಹೇಝಲ್‌ವುಡ್‌ ತಲಾ 2 ವಿಕೆಟ್ ಪಡೆದರು. ಮ್ಯಾಕ್ಸ್‌ ವೆಲ್‌ 1 ವಿಕೆಟ್ ಪಡೆದರು.

ಅಂಕಪಟ್ಟಿಯಲ್ಲಿ 6 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್ 8 ಅಂಕದೊಂದಿಗೆ (+1.232 ರನ್ ರೇಟ್) 3 ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯ ಕೂಡ 4 ಗೆಲುವಿನೊಂದಿಗೆ( +0.970 ರನ್ ರೇಟ್) 4 ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next