ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಸ್ಟ್ ಗಳಿಂದ ಸದಾ ವಿವಾದದಲ್ಲಿರುವ ಐಸಿಸಿ ಈಗ ಭಾರತದ ಬ್ಯಾಟಿಂಗ್ ದಿಗ್ಗಜ, ಬಲಗೈ ಬ್ಯಾಟ್ಸ್ ಮನ್ ಆಗಿರುವ ರಾಹುಲ್ ದ್ರಾವಿಡ್ ರನ್ನು ಎಡಗೈ ಬ್ಯಾಟ್ಸಮನ್ ಎಂದಿದೆ. ಐಸಿಸಿಯ ಹಾಲ್ ಆಫ್ ಫೇಮ್ ವೆಬ್ ಸೈಟ್ ನಲ್ಲಿ ದ್ರಾವಿಡ್ ಒಬ್ಬ ಎಡಗೈ ಬ್ಯಾಟ್ಸ್ ಮನ್ ಎಂದು ನಮೂದಿಸಿದೆ.
ಐಸಿಸಿಯ ಈ ತಪ್ಪು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ಇದರಿಂದ ಎಚ್ಚೆತ್ತ ಐಸಿಸಿ ಕೂಡಲೇ ತಪ್ಪನ್ನು ಸರಿಮಾಡಿದೆ.
ಐಸಿಸಿಯ ಅಧಿಕೃತ ವೆಬ್ ಸೈಟ್ ನ ಹಾಲ್ ಆಫ್ ಫೇಮ್ ಪೇಜ್ ನಲ್ಲಿ ಐಸಿಸಿ ಈ ತಪ್ಪು ಮಾಡಿದೆ. ರಾಹುಲ್ ದ್ರಾವಿಡ್ ಅವರನ್ನು ಪರಿಚಯಿಸುವ ಪೇಜ್ ನಲ್ಲಿ ಬ್ಯಾಟಿಂಗ್ ಶೈಲಿ ಎಂಬಲ್ಲಿ ಎಡಗೈ ಎಂದು ಬರೆದಿದೆ. ಐಸಿಸಿಯ ಈ ಪ್ರಮಾದಕ್ಕೆ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ನವೆಂಬರ್ ನಲ್ಲಿ ರಾಹುಲ್ ದ್ರಾವಿಡ್ ಐಸಿಸಿಯ ಪ್ರತಿಷ್ಠಿತ ‘ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರವಾಗಿದ್ದರು.
‘ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ 16 ವರ್ಷಗಳಷ್ಟು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸೇವೆ ಸಲ್ಲಿಸಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 13,288 ರನ್ ಮತ್ತು ಏಕದಿನದಲ್ಲಿ 10889 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಯಾವ ಶೈಲಿಯ ಆಟಗಾರ ಎಂಬ ಸಾಮಾನ್ಯ ಜ್ಞಾನವೂ ಐಸಿಸಿಗೆ ಇಲ್ಲವೇ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.