Advertisement

ಐಸಿಸಿ-ಬಿಸಿಸಿಐ ನಡುವೆ ತಿಕ್ಕಾಟ?

12:37 AM Oct 16, 2019 | mahesh |

ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಇನ್ನೊಂದು ಸುತ್ತಿನ ತಿಕ್ಕಾಟಕ್ಕೆ ವೇದಿಕೆ ಸಜ್ಜಾಗಿದೆ. 2023ರಿಂದ 2031ರ ಆವೃತ್ತಿಯಲ್ಲಿ ಹೆಚ್ಚುವರಿ ಪಂದ್ಯಗಳನ್ನು ಆಡುವ ಕುರಿತು ಐಸಿಸಿ ಮುಂದಿಟ್ಟಿರುವ ಪ್ರಸ್ತಾವವೇ ಈ ತಿಕ್ಕಾಟಕ್ಕೆ ಕಾರಣ. ಒಂದು ವೇಳೆ ಐಸಿಸಿಯ ಪ್ರಸ್ತಾವ ಅನುಮೋದನೆಗೊಂಡರೆ ಬಿಸಿಸಿಐ ದೊಡ್ಡ ಮೊತ್ತದ ವರಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ.

Advertisement

ಏನಿದು ಪ್ರಸ್ತಾವ?
ವಾರಾಂತ್ಯದಲ್ಲಿ ದುಬಾೖಯಲ್ಲಿ ನಡೆದ ಸಭೆಯಲ್ಲಿ ಐಸಿಸಿ 2023-2031ರ ಆವೃತ್ತಿಯಲ್ಲಿ ಒಂದು ಪುರುಷರ ಮತ್ತು ವನಿತೆಯರ ಕೂಟವನ್ನು ಏರ್ಪಡಿಸುವ ತೀರ್ಮಾನಕ್ಕೆ ಬಂದಿದೆ. ಇದರಲ್ಲಿ ಏಕದಿನ ವಿಶ್ವಕಪ್‌ ಕೂಟ, ನಾಲ್ಕು ವಿಶ್ವಕಪ್‌ ಟಿ-20 ಕೂಟಗಳು ಮತ್ತು ಹೊಸ ಆವೃತ್ತಿಯ ಎರಡು ವಿಶ್ವ ಕೂಟಗಳು ಸೇರಿವೆ. ಹೊಸ ಆವೃತ್ತಿ ಬಹುತೇಕ 50 ಓವರ್‌ಗಳ ಕೂಟವಾಗಿರಬಹುದು. 50 ಓವರ್‌ಗಳ ಕೂಟ ಹೆಚ್ಚುಕಮ್ಮಿ ಚಾಂಪಿಯನ್ಸ್‌ ಟ್ರೋಫಿಯ ಕಿರು ಆವೃತ್ತಿಯ ಮಾದರಿಯಲ್ಲಿರುತ್ತದೆ. ಇದರಲ್ಲಿ ಆರು ತಂಡಗಳು ಮಾತ್ರ ಭಾಗವಹಿಸಲಿವೆ.

ಬಿಸಿಸಿಐ ವಿರೋಧವೇಕೆ?
ಐಸಿಸಿಯ ಈ ಯೋಜನೆಯಿಂದ ಬಿಸಿಸಿಐಯ ವರಮಾನಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಬಿಸಿಸಿಐ ಇದನ್ನು ವಿರೋಧಿಸುತ್ತಿದೆ. ಉದಾಹರಣೆಗೆ ಹೇಳುವುದಾದರೆ ಸ್ಟಾರ್‌ ಅಥವಾ ಸೋನಿ ಚಾನೆಲ್‌ಗ‌ಳು ಪ್ರಸಾರದ ಹಕ್ಕಿಗಾಗಿ 100 ಕೋ. ರೂ. ಹೂಡಿಕೆ ಮಾಡುತ್ತವೆ ಎಂದಿಟ್ಟುಕೊಳ್ಳೋಣ. ಈ ಪೈಕಿ ಐಸಿಸಿಯ ಕೂಟ ಮೊದಲು ನಡೆದರೆ ಹೂಡಿಕೆದಾರರು ಐಸಿಸಿಯ ಪ್ರಸಾರ ಹಕ್ಕುಗಳನ್ನು ಪಡೆಯಲು ದೊಡ್ಡ ಮೊತ್ತವನ್ನು ವಿನಿಯೋಗಿಸಬೇಕಾಗುತ್ತದೆ. 2023-28ರ ಅವಧಿಯ ಪಂದ್ಯಗಳ ಪ್ರಸಾರಕ್ಕಾಗಿ ಶೇ. 60 ಬಜೆಟ್‌ ಮೊತ್ತವನ್ನು ವಿನಿಯೋಗಿಸಿದರೆ ಅನಂತರ ಬಿಸಿಸಿಐಯ ಪಂದ್ಯಗಳ ಹಕ್ಕುಗಳನ್ನು ಖರೀದಿಸಲು ಉಳಿಯುವುದು ಬರೀ ಶೇ. 40 ಮೊತ್ತ ಎಂದು ಕ್ರಿಕೆಟ್‌ ಅಧಿಕಾರಿಯೋರ್ವರು ವಿವರಿಸಿದ್ದಾರೆ.

ಬಿಸಿಸಿಐ ವರಮಾನವನ್ನು ಕಡಿಮೆಗೊಳಿಸಬೇಕೆಂಬ ಉದ್ದೇಶದಿಂದಲೇ ಐಸಿಸಿ ಈ ಯೋಜನೆ ರೂಪಿಸಿಕೊಂಡಿದೆ. ಇದೀಗ ಸಂಭಾವ್ಯ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆ ಅಧಿಕಾರಿ ಹೇಳಿದ್ದಾರೆ. ಐಸಿಸಿಯಿಂದ ಬರಬೇಕಾಗಿರುವ ಹಕ್ಕಿನ ಹಣವನ್ನು ವಸೂಲು ಮಾಡುವುದಾಗಿ ಗಂಗೂಲಿ ಹೀಗಾಗಲೇ ಹೇಳಿದ್ದಾರೆ. ಹೀಗಾಗಿ ಅಧಿಕಾರ ವಹಿಸಿಕೊಂಡ ಬೆನ್ನಿಗೆ ಗಂಗೂಲಿ ಐಸಿಸಿ ಜತೆಗೆ ತಿಕ್ಕಾಟಕ್ಕೆ ಇಳಿಯುವ ಸನ್ನಿವೇಶ ಈಗ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next