ಧಾರವಾಡ: ಮಹಾರಾಷ್ಟ್ರ ರಾಜ್ಯದ ಬಾರಾಮತಿಯ ಮಾಳೆಗಾಂವ್‌ನ ಐಸಿಎಆರ್-ಎನ್‌ಐಎಎಸ್‌ಎಂ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯೊಂದಿಗೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಕೃಷಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕೃಷಿ ವಿಜ್ಞಾನಿಗಳು ನಡೆಸುವ ಸಂಶೋಧನೆಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗ ಸಂಸ್ಥೆಯಾದ ಇದು ಸಸ್ಯಗಳಲ್ಲಿ ಅಜೈವಿಕ ಒತ್ತಡ ನಿರ್ವಹಣೆ ಸಂಶೋಧನೆ ಕೈಗೊಳ್ಳುತ್ತಿದ್ದು, ಈ ಸಂಸ್ಥೆಯೊಂದಿಗೆ ಸೋಮವಾರ ಕೃಷಿ ವಿವಿಯು ಒಡಂಬಡಿಕೆ ಮಾಡಿಕೊಂಡಿತು. ಬಾರಾಮತಿಯ ರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥ ಡಾ|ಜಗದೀಶ ರಾಣೆ ಮತ್ತು ಕೃಷಿ ವಿವಿ ಕುಲಸಚಿವ ಡಾ| ವಿ.ಆರ್. ಕಿರೇಸೂರ ಒಡಂಬಡಿಕೆಗೆ ಸಹಿ ಹಾಕಿದರು.
ಕೃಷಿ ವಿವಿ ಕುಲಪತಿ ಡಾ| ಮಹದೇವ ಚೆಟ್ಟಿ ಮಾತನಾಡಿ, ನೀರಿನ ಕೊರತೆ ಅಥವಾ ಪ್ರವಾಹ, ಉಷ್ಣಾಂಶ ಏರುಪೇರುಗಳಿಂದಾಗುವ ಪ್ರಭಾವ ಹಾಗೂ ಇವುಗಳಿಂದ ಸಸ್ಯಗಳ ಬೆಳವಣಿಗೆ-ಇಳುವರಿ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸಂಶೋಧನಾ ಕಾರ್ಯ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಸ್ಯಗಳ ಮೇಲೆ ಅಜೈವಿಕ ಒತ್ತಡಗಳ ಸಂಶೋಧನೆ ನಿರ್ವಹಿಸುತ್ತಿರುವ ಮಹಾರಾಷ್ಟ್ರದ ಬಾರಾಮತಿಯ ರಾಷ್ಟ್ರೀಯ ಸಂಸ್ಥೆಯೊಂದಿಗೆ ಕೃಷಿ ವಿಶ್ವವಿದ್ಯಾಲಯವು ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಮುಂಬರುವ ದಿನಗಳಲ್ಲಿ ರೈತರಿಗೆ ಇದು ಅತ್ಯಂತ ಫಲಕಾರಿಯಾಗಲಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ನೀರಿನ ಕೊರತೆ ಹಾಗೂ ಪ್ರವಾಹಗಳಂತಹ ಪ್ರತಿಕೂಲ ಪರಿಸ್ಥಿತಿಗಳು ಹೆಚ್ಚಾಗುತ್ತಿದ್ದು, ಅವುಗಳ ಮೇಲೆ ಮೇಲುಗೈ ಸಾಧಿ ಸಿ ಕೃಷಿ ಉತ್ಪಾದನೆ ಹೆಚ್ಚಿಸುವುದು ಸವಾಲಿನ ಕಾರ್ಯವಾಗಿದೆ ಎಂದು ಹೇಳಿದರು.
ಕೃಷಿ ವಿವಿ ಶಿಕ್ಷಣ ನಿರ್ದೇಶಕರು, ವಿಸ್ತರಣಾ ನಿರ್ದೇಶಕರು, ವಿದ್ಯಾಧಿಕಾರಿಗಳು, ಡೀನ್, ಆಡಳಿತಾ ಧಿಕಾರಿಗಳು, ಹಣಕಾಸು ನಿಯಂತ್ರಣಾಧಿಕಾರಿಗಳು ಇದ್ದರು.