Advertisement

ಸರ್ಕಾರಿ ಗೌರವಗಳೊಂದಿಗೆ ಇಬ್ರಾಹಿಂ ಸುತಾರ ಅಂತ್ಯಸಂಸ್ಕಾರ

09:29 PM Feb 05, 2022 | Team Udayavani |

ಮಹಾಲಿಂಗಪುರ : ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರಿಗೆ ರಾಜ್ಯ ಸರ್ಕಾರದ ಆದೇಶದಂತೆ ಸಕಲ ಸರ್ಕಾರಿ ಗೌರವವಗಳೊಂದಿಗೆ ಶನಿವಾರ ಸಂಜೆ ಅಂತಿಮ ನಮನಗಳನ್ನು ಸಲ್ಲಿಸಲಾಯಿತು.

Advertisement

ಸಾರ್ವಜನಿಕ ದರ್ಶನ ವ್ಯವಸ್ಥೆ :
ರಬಕವಿ-ಬನಹಟ್ಟಿ ತಾಲೂಕಾ ಆಡಳಿತದಿಂದ ಇಬ್ರಾಹಿಂ ಸುತಾರ ಅವರ ಪಾರ್ಥಿವ ಶರೀದ ಅಂತಿಮ ದರ್ಶನಕ್ಕಾಗಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮತ್ತು ಪ್ರೌಢಶಾಲೆಯ ಆವರಣದಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಇಸ್ಲಾಂ ಧರ್ಮದ ಪದ್ದತಿಯಂತೆ ಮನೆಯಲ್ಲಿ ನೇರವೇರಿಸಬೇಕಾದ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿ, ಮಧ್ಯಾಹ್ನ 12ಕ್ಕೆ ಮನೆಯಿಂದ ಸಾರ್ವಜನಿಕ ದರ್ಶನ ಸ್ಥಳವಾದ ಕಾಲೇಜು ಮೈದಾನದವರೆಗೂ ಪಾರ್ಥಿವ ಶರೀರವನ್ನು ಹೆಗಲಮೇಲೆ ಹೊತ್ತು ತಂದು, ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು.

ಸಾವಿರಾರು ಜನರಿಂದ ದರ್ಶನ :
ಮಧ್ಯಾಹ್ನ 12ರಿಂದ ಸಂಜೆ 4-30ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ವಿವಿಧ ಊರುಗಳಿಂದ ಆಗಮಿಸಿದ ಅವರ ಅಭಿಮಾನಿಗಳು, ಪೂಜ್ಯರು, ಶರಣರು, ಶಾಲಾ ಮಕ್ಕಳು, ಶಿಕ್ಷಕರು, ರೈತ ಸಂಘದ ಮುಖಂಡರು ಸೇರಿದಂತೆ ಸಾವಿರಾರು ಜನರು ಇಬ್ರಾಹಿಂ ಸುತಾರ ಅವರ ಅಂತಿಮ ದರ್ಶನ ಪಡೆದು, ನಮನಗಳನ್ನು ಸಲ್ಲಿಸಿದರು.

Advertisement

ಗಣ್ಯರಿಂದ ದರ್ಶನ : ಮಾಜಿ ಸಚಿವ ಎಸ್.ಆರ್.ಪಾಟೀಲ್, ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ, ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ರೈತ ಸಂಘದ ಮುಖಂಡರಾದ ಸುಭಾಸ ಶಿರಬೂರ, ಗಂಗಾಧರ ಮೇಟಿ ಸೇರಿದಂತೆ ಪುರಸಭೆ ಸದಸ್ಯರು, ರಾಜಕೀಯ ಮುಖಂಡರು, ಸಾಹಿತಿಗಳು, ಪಟ್ಟಣದ ವಿವಿಧ ಸಮಾಜದ ಗುರುಹಿರಿಯರು ಇಬ್ರಾಹಿಂ ಸುತಾರ ಅವರ ಅಂತಿಮ ದರ್ಶನ ಪಡೆದುಕೊಂಡರು.

ಸರ್ಕಾರಿ ಗೌರವ ಸಮರ್ಪಣೆ :
ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಇರಿಸಿದ್ದ ಸರ್ಕಾರಿ ಕಾಲೇಜು ಆವರಣದಲ್ಲಿಯೇ ಶನಿವಾರ ಸಂಜೆ 4-30ಕ್ಕೆ ಶಾಸಕ ಸಿದ್ದು ಸವದಿ, ಜಮಖಂಡಿ ಎಸಿ ಸಿದ್ದು ಹುಲ್ಲೋಳ್ಳಿ, ಹಲವು ಪೂಜ್ಯರು, ಗಣ್ಯರ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲಾ ಡಿಆರ್ ಘಟಕದಿಂದ ಗಾಳಿಯಲ್ಲಿ ಮೂರು ಸತ್ತು ಗುಂಡು ಹಾರಿಸಿ, ರಾಜ್ಯ ಸರ್ಕಾರದ ಗೌರವಗಳನ್ನು ಸಲ್ಲಿಸಲಾಯಿತು.

ಪಾರ್ಥಿವ ಶರೀರದ ಮೇರವಣಿಗೆ :
ಸಂಜೆ 5ಕ್ಕೆ ಸರ್ಕಾರಿ ಕಾಲೇಜು ಆವರಣದಿಂದ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡಚೌಕಿ, ವಿವೇಕ ವೃತ್ತ, ಡಬಲ ರಸ್ತೆ, ಬಸವ ವೃತ್ತ, ಬಸವನಗರ ಮಾರ್ಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಇಬ್ರಾಹಿಂ ಸುತಾರ ಅವರ ಸ್ವಂತ ಹೊಲದಲ್ಲಿನ ಅಂತ್ಯ ಸಂಸ್ಕಾರದ ಸ್ಥಳದವರೆಗೆ ಪಾರ್ಥಿವ ಶರೀರದ ಮೇರವಣೆಗೆ ನಡೆಸಲಾಯಿತು. ಶನಿವಾರ ಸಂಜೆ 6-30ಕ್ಕೆ ಇಬ್ರಾಹಿಂ ಸುಪುತ್ರ ಹುಮಾಯೂನ ಸುತಾರ ಅವರು ಇಸ್ಲಾಂ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರವನ್ನು ನೇರವೇರಿಸಿದರು.

ಶನಿವಾರ ಸಂಜೆ ಜಗತ್ತು ಬೆಳಗಿದ ಸೂರ್ಯನು ಪಶ್ಚೀಮದಲ್ಲಿ ಮೂಳಗಿದರೇ, ಇತ್ತ ತಮ್ಮ ಪ್ರವಚನ ಪ್ರತಿಭೆಯಿಂದ ಮಹಾಲಿಂಗಪುರ ಕೀರ್ತಿಯನ್ನು ದೇಶಾದ್ಯಂತ ಬೆಳಗಿಸಿದ್ದ ಹಿಂದು-ಮುಸ್ಲಿಂ ಭಾವೈಕ್ಯತಾ ಸಂದೇಶದ ಹರಿಕಾರ ಇಬ್ರಾಹಿಂ ಸುತಾರ ಪಂಚಭೂತಗಳಲ್ಲಿ ಲೀನವಾದರು.

Advertisement

Udayavani is now on Telegram. Click here to join our channel and stay updated with the latest news.

Next