Advertisement

ಐಎಎಸ್‌ ಮಾಡಬೇಕಿದ್ದವನು ಕೃಷಿಕನಾದೆ…

05:02 AM Jul 07, 2020 | Lakshmi GovindaRaj |

ಪಿಯುಸಿಯಲ್ಲಿ ಒಳ್ಳೆ ಅಂಕ ಬಂತು. ಆದರೆ ಅಪ್ಪನಿಗೆ ಹುಷಾರಿಲ್ಲದ ಕಾರಣ, ತೋಟದ ಕೆಲಸಗಳನ್ನು ನೋಡಿಕೊಳ್ಳಬೇಕಿತ್ತು. ಹೀಗಾಗಿ, ಪದವಿಯ ಓದು ಸರಿಯಾಗಿ ಆಗಲಿಲ್ಲ.

Advertisement

ಅದೇನೋ ಗೊತ್ತಿಲ್ಲ. ಹೈಸ್ಕೂಲಲ್ಲಿ ಐಎಎಸ್‌ ಆಫೀಸರಾಗಬೇಕು ಅಂತ ಅನಿಸೋಕೆ ಶುರುವಾಗಿತ್ತು. ಕಾರಣ ಇಷ್ಟೇ, ನಮ್ಮೂರಿಗೆ ರಾಜಕೀಯ ವ್ಯಕ್ತಿಯೊಬ್ಬರು ಪದೇಪದೆ ಬರೋರು. ಅವರು ಬಂದಾಗ ಗೆಳೆಯರೆಲ್ಲಾ ಅವರ ಬಳಿ  ಹೋಗುತ್ತಿದ್ದೆವು. ಅವರ ಜೊತೆ ಕೋಟು, ಕನ್ನಡ ಧರಿಸಿದ ವ್ಯಕ್ತಿ ಇರುತ್ತಿದ್ದ. ಆ ರಾಜಕೀಯ ವ್ಯಕ್ತಿ, ಅವರ ಮಾತನ್ನು ಜಾಸ್ತಿ ಕೇಳುತ್ತಿದ್ದರು. ಒಂದು ಸಲ ನಾನು ಗೆಳೆಯನನ್ನು ಕೇಳಿದೆ- ಈ ಕೋಟಿನ ವ್ಯಕ್ತಿ ಯಾರು? ಅಂತ.

“ಆತ ಐಎಎಸ್‌  ಆಫೀಸರ್‌ ಸಿಕ್ಕಾಪಟ್ಟೆ ಓದಿದ್ದಾರೆ. ಅದಕ್ಕೇ ಅವರಿಗೆ ರಾಜಕೀಯ ವ್ಯಕ್ತಿ ಕೂಡ ಗೌರವ ಕೊಡ್ತಾರೆ…” ಅಂತೆಲ್ಲ ಗೆಳೆಯ ಹೇಳಿದ. ಹೀಗಾಗಿ, ನನಗೆ ರಾಜಕೀಯ ವ್ಯಕ್ತಿ ಆಗೋಕ್ಕಿಂತ ಕೋಟ್‌ ಹಾಕಿಕೊಂಡು ಮೆರೆಯಬೇಕು, ಐಎಎಸ್‌ ಆಫೀಸರ್‌ ಆಗಬೇಕು ಅನ್ನೋ ಉಮೇದು ಹೆಚ್ಚಾಯ್ತು. ಹೀಗಾಗಿ, ಹತ್ತನೇ ತರಗತಿಗೆ ಬಂದಾಗ ನಮ್ಮ ಮೇಷ್ಟ್ರು ಮನೆಗೆ ಹೋಗಿ, ಅವರನ್ನು ಕೇಳಿ, ಮುಂದಕ್ಕೆ ಏನೇನು ಓದಬೇಕು ಅಂತ ಪಟ್ಟಿ ಮಾಡಿಕೊಂಡಿದ್ದೆ.

ಅಪ್ಪನ ಬಳಿ ಹೋಗಿ, ಇಷ್ಟೆಲ್ಲಾ  ಪುಸ್ತಕ ಬೇಕು ಅಂದಾಗ ಕಣ್ಣುಕಣ್ಣು ಬಿಟ್ಟರು. ಆಗ ಕೋಪ ಮಾಡಿಕೊಂಡು, ಶೆಟ್ಟರ ಅಂಗಡಿಯಲ್ಲಿ ಪೊಟ್ಟಣ ಕಟ್ಟಿ ತಿಂಗಳಿಗೆ 500 ರೂ. ಪಡೆದದ್ದೇ ಮೊದಲ ಪೊ›ಫೆಷನ್‌. ನಾನು ಊರಿನಲ್ಲಿ ಫೇಮಸ್‌ ಆಗಿದ್ದೇ ಅಂಗಡಿಯಲ್ಲಿ ಪೊಟ್ಟಣ  ಕಟ್ಟುವ ನಿರ್ಧಾರದಿಂದ. ಅರೇ, ತಾನೇ ಸಂಪಾದಿಸಿ, ಆ ಹಣದಿಂದಲೇ ಓದುತ್ತಿದ್ದಾನೆ ಅಂತ ಎಲ್ಲರೂ ಹೊಗಳ್ಳೋರು. ಪಿಯುಸಿಯಲ್ಲಿ ಒಳ್ಳೆ ಅಂಕ ಬಂತು.

ಆದರೆ ಅಪ್ಪನಿಗೆ ಹುಷಾರಿಲ್ಲದ ಕಾರಣ, ತೋಟದ ಕೆಲಸಗಳನ್ನು ನೋಡಿಕೊಳ್ಳಬೇಕಿತ್ತು. ಹೀಗಾಗಿ, ಪದವಿಯ ಓದು  ಸರಿಯಾಗಿ ಆಗಲಿಲ್ಲ. ಅಪ್ಪ ನಿಧನರಾದರು. ಮನೆಯ ಜವಾಬ್ದಾರಿ ನನ್ನ ಮೇಲೆ ಬಿತ್ತು. ಪದವಿ ಮುಗಿಸಿ, ಒಂದು ಕೈ ನೋಡುವಾ ಅಂತ ಎರಡು ಬಾರಿ ಐಎಎಸ್‌ ಪರೀಕ್ಷೆ ಬರೆದು  ಫೇಲಾದೆ. ಸರ್ಕಾರಿ ಕೆಲಸ ಹಿಡಿಯುವ ಪ್ರಯತ್ನವೂ ನಡೆಯಿತು. ಮುನ್ಸಿಪಾಲಿಟಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಆಗಿ ಸೇರಿದೆ.

Advertisement

ಅಲ್ಲಿ ಬರುತ್ತಿದ್ದ ಸಂಬಳ ಬರೀ ಐದು ಸಾವಿರ. ಅಡಿಕೆ, ಮಾವಿನ ಕೃಷಿಯಲ್ಲಿ ಸಿಗುತ್ತಿದ್ದ ಆದಾಯ  ವಾರ್ಷಿಕ ನಾಲ್ಕೈದು ಲಕ್ಷ. ಅಂದರೆ, ತಿಂಗಳಿಗೆ 40 ಸಾವಿರ. ಇದನ್ನು ಏಕೆ ಅಭಿವೃದ್ಧಿ ಮಾಡಬಾರದು ಅಂತ ಯೋಚಿಸಿ, ಡಾಟಾ ಎಂಟ್ರಿ ಆಪರೇಟರ್‌ ಕೆಲಸ ಬಿಟ್ಟೆ. ಅಪ್ಪ ಹೇಳಿಕೊಟ್ಟ ಮಾರ್ಗವನ್ನು ಇಟ್ಟುಕೊಂಡು, ಸಾವಯವ  ಸೂತ್ರಗಳನ್ನು ಅಳವಡಿಸಿದೆ.

ಒಟ್ಟು ನಾಲ್ಕು ಎಕರೆ ಜಮೀನನ್ನ ಅಭಿವೃದ್ಧಿಪಡಿಸಿದೆ. ಹೈನುಗಾರಿಕೆ ತಂದೆ. ಕಾಲು ಎಕರೆಯಲ್ಲಿ ಹೂವನ್ನು ಬೆಳೆದೆ. ಇನ್ನೊಂದು ಕಡೆ ನರ್ಸರಿ ಮಾಡಿದೆ. ಒಂದಷ್ಟು ಹೋಟೆಲ್‌ಗೆ ತರಕಾರಿಗಳನ್ನು ಸಪ್ಲೈ ಮಾಡಲು ಒಪ್ಪಂದ ಮಾಡಿಕೊಂಡಿದ್ದೇನೆ. ಅದು ವಾರದ ಆದಾಯಕ್ಕೆ, ಕೆಲಸಗಾರರ ಸಂಬಳಕ್ಕೆ ಆಗುತ್ತದೆ. ಉಳಿದಂತೆ, ಬೆಂಗಳೂರಿನಲ್ಲಿ ಒಂದಷ್ಟು ಅಪಾರ್ಟ್‌ಮೆಂಟ್‌ಗಳು, ನರ್ಸರಿಗಳಿಗೆ ಗಿಡಗಳನ್ನು ಕೊಡುವ ಒಪ್ಪಂದ ಮಾಡಿಕೊಂಡಿದ್ದೇನೆ.

ಅದು ತಿಂಗಳ ಆದಾಯ. ಹೈನುಗಾರಿಕೆ, ಪ್ರತಿ ವಾರಕ್ಕೆ ಆದಾಯ. ಹೀಗೆ, ವಾರ್ಷಿಕವಾಗಿ 15 ಲಕ್ಷ ಆದಾಯ ಸಿಗುತ್ತಿದೆ. ಮೊನ್ನೆ ನನ್ನ ಗೆಳೆಯನೊಬ್ಬ ತೋಟಕ್ಕೆ ಬಂದಿದ್ದ. ಅವನ ಖಾಸಾ ಗೆಳೆಯ ಐಎಸ್‌ಎಸ್‌ ಆಫೀಸರ್‌ ಅಂತೆ. ಎಷ್ಟಪ್ಪ ನಿನ್ನ ಗೆಳೆಯನಿಗೆ ಸಂಬಳ? ಅಂತ ಕೇಳಿದೆ. ಅವನು,  ತಿಂಗಳಿಗೆ ಒಂದು ಲಕ್ಷ. ಆದರೆ, ದಿನದ 24 ಗಂಟೆ ಕೆಲಸ. ಹೆಸರಿದೆ, ನೆಮ್ಮದಿ ಇಲ್ಲ ಅಂದ. ಆ ಮಾತು ಕೇಳಿದ ನಂತರ, ಈ ಕೃಷಿ ಕೆಲಸದಲ್ಲಿ ಎಷ್ಟೊಂದು ನೆಮ್ಮದಿ ಇದೆ ಅಲ್ಲವಾ ಅನಿಸಿತು.

* ಶ್ರೀಧರ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next