ನವದೆಹಲಿ:ರಾಜಕೀಯಕ್ಕಾಗಿ ಐಎಎಸ್ ಹುದ್ದೆ ತೊರೆದಿದ್ದ ಕಾಶ್ಮೀರದ ಶಾ ಫೈಸಲ್ ಅವರನ್ನು ವಿದೇಶಕ್ಕೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಬುಧವಾರ ಅಧಿಕಾರಿಗಳು ವಶಕ್ಕೆ ಪಡೆದು ಕಾಶ್ಮೀರಕ್ಕೆ ವಾಪಸ್ ಕಳುಹಿಸಿರುವ ವಿದ್ಯಮಾನ ನಡೆದಿದೆ.
ದೆಹಲಿಯಿಂದ ಇಸ್ತಾಂಬುಲ್ ಗೆ ತೆರಳಲು ಶಾ ವಿಮಾನ ನಿಲ್ದಾಣಕ್ಕೆ ಆಗಮಿಸಿರುವುದಾಗಿ ವರದಿ ವಿವರಿಸಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವ ಕ್ರಮಕ್ಕೆ ಶಾ ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ನಮ್ಮ(ಕಾಶ್ಮೀರದ) ರಾಜಕೀಯ ಹಕ್ಕುಗಳನ್ನು ಪುನರ್ ಸ್ಥಾಪಿಸಿಕೊಳ್ಳಲು ಹಿಂಸಾರಹಿತವಾದ ರಾಜಕೀಯದ ಚಳವಳಿಯ ಅಗತ್ಯವಿದೆ ಎಮದು ಶಾ ಮಂಗಳವಾರ ಟ್ವೀಟರ್ ನಲ್ಲಿ ಬರೆದುಕೊಂಡಿದ್ದ.
ತಾನು ಈ ಬಾರಿ ಈದ್ ಆಚರಿಸುವುದಿಲ್ಲ. ನಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವವರೆಗೂ ಈದ್ ಸಂಭ್ರಮ ಆಚರಿಸುವುದಿಲ್ಲ ಎಂದು ಶಾ ಘೋಷಿಸಿದ್ದ ಎಂದು ವರದಿ ಹೇಳಿದೆ.
ಶ್ರೀನಗರಕ್ಕೆ ಆಗಮಿಸುತ್ತಿದ್ದಂತೆಯೇ ಶಾ ಫೈಸಲ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ ಎ)ಯಡಿ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.