Advertisement

ತಿವಾರಿ ಸಾವು: ಮುಂದುವರಿದ ಗೊಂದಲ

12:44 PM May 21, 2017 | |

ಬೆಂಗಳೂರು: ಉತ್ತರಪ್ರದೇಶದಲ್ಲಿ ಮೃತಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಾಗಿದ್ದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅಸಹಜ ಸಾವು ಪ್ರಕರಣದ ಗೊಂದಲ ಹಾಗೆಯೇ ಮುಂದುವರಿದಿದೆ.

Advertisement

ಅನುರಾಗ್‌ ತಿವಾರಿ ಕರ್ನಾಟಕದ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಹಲವು ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಲು
ಉದ್ದೇಶಿಸಿದ್ದರು. ಹೀಗಾಗಿ, ಅವರ ನಿಗೂಢ ಸಾವಿನ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿಯಬೇಕಾಗಿದೆ ಎಂದು
ಉತ್ತರಪ್ರದೇಶದ ಸಚಿವರೊಬ್ಬರು ಅಲ್ಲಿನ ವಿಧಾನಸಭೆಯಲ್ಲಿ ಹೇಳಿದ್ದರು. ಜೊತೆಗೆ ತಿವಾರಿ ಸಾವನ್ನಪ್ಪಲು ರಾಜ್ಯದ ಐಎಎಸ್‌
ಅಧಿಕಾರಿಗಳು ಕಾರಣ, ನಾಲ್ಕು ತಿಂಗಳಿನಿಂದ ವೇತನ ನೀಡಿರಲಿಲ್ಲ ಎಂದು ತಿವಾರಿ ಕುಟುಂಬದವರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಯಾ ಮಾಹಿತಿ ಕೇಳಿದ್ದರು. ಆದರೆ, ಅಂತಹ ಯಾವುದೇ ಹಗರಣ ನಡೆದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ತಿವಾರಿ ಸಾವಿನ ಕುರಿತು ಗೊಂದಲ ಮುಂದುವರಿದಿದೆ.

ಮುಖ್ಯಕಾರ್ಯದರ್ಶಿಗೆ ವರದಿ: ತಿವಾರಿ ಅವರ ಅಸಹಜ ಸಾವು ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲು ರಾಜ್ಯ ಸರ್ಕಾರದಿಂದ ತೆರಳಿದ್ದ ಐಎಎಸ್‌ ಅಧಿಕಾರಿಗಳಾದ ಅಭಿರಾಂ ಶಂಕರ್‌ ಮತ್ತು ಪಂಕಜ್‌ಕುಮಾರ್‌ ಪಾಂಡೆ ಶನಿವಾರ ವಾಪಸಾಗಿದ್ದು, ಪ್ರಕರಣದ ಕುರಿತ ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ್ದಾರೆ. ಆದರೆ, ವರದಿಯ ಮಾಹಿತಿ ಬಹಿರಂಗಗೊಳಿಸಲು ಅಧಿಕಾರಿಗಳು
ನಿರಾಕರಿಸಿದ್ದಾರೆ. ತಿವಾರಿ ಸಾವಿನ ಕುರಿತು ಉತ್ತರಪ್ರದೇಶ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸಲು 72 ಗಂಟೆಗಳ ಕಾಲಾವಕಾಶ ನೀಡಿದೆ. ತನಿಖೆಯ ಪ್ರಾಥಮಿಕ ವರದಿ ಸಲ್ಲಿಸಿದ ಬಳಿಕ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ಅಧಿಕಾರಿಗಳು ರಾಜ್ಯಕ್ಕೆ ಬರುವ ಸಾಧ್ಯತೆ ಇದೆ.

ಸಿಬಿಐ ತನಿಖೆ ಕೋರಿ ಯುಪಿ ಸಿಎಂಗೆ ಬಿಎಸ್‌ವೈ ಪತ್ರ
ಬೆಂಗಳೂರು
: ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬತ್ರ ಬರೆದಿದ್ದಾರೆ. ಅನುರಾಗ್‌ ತಿವಾರಿ ಸಾವಿನ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದಿರುವುದಾಗಿ ಯಡಿಯೂರಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಆಹಾರ ಇಲಾಖೆಯಲ್ಲಿ ನಡೆದ ಅಕ್ರಮ ಹೊರಗೆಳೆಯಲು ತಿವಾರಿ ತಯಾರಿ ನಡೆಸಿದ್ದರು ಎಂದು ಅವರ ಸಹೋದರ ಹೇಳಿದ್ದಾರೆ. ಇದೇ ವೇಳೆ, ತಿವಾರಿ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಅವರ ಸಹೋದರ ಮಯಾಂಕ್‌ ಅವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ.

ಶೀಘ್ರ ತನಿಖೆಗೆ ಸಿಎಸ್‌ ಮನವಿ 
ಬೆಂಗಳೂರು:
ಐಎಎಸ್‌ ಅಧಿಕಾರಿ ಅನುರಾಗ ತಿವಾರಿ ಸಾವಿನ ಪ್ರಕರಣದ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿಕೊಂಡಿದ್ದಾರೆ. 

ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಸುಭಾಷ್‌ಚಂದ್ರ ಕುಂಟಿಯಾ, ಐಎಎಸ್‌ ಅಧಿಕಾರಿ ಅನುರಾಗ ತಿವಾರಿ ಸಾವಿನ ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣದ ಬಗ್ಗೆ ಬೇಗ ತನಿಖೆ ನಡೆಸಿ ವರದಿ ನೀಡಿದರೆ, ಸತ್ಯಾಂಶ ತಿಳಿಯುತ್ತದೆ ಎನ್ನುವ ಉದ್ದೇಶದಿಂದ ತನಿಖೆಗೆ ಒತ್ತಡ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ. ಇನ್ನು, ಅನುರಾಗ್‌ ತಿವಾರಿ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕಲು ರಾಜ್ಯ ಸರ್ಕಾರ ಕಳುಹಿಸಿರುವ ಇಬ್ಬರು ಐಎಎಸ್‌ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅನುರಾಗ್‌ ತಿವಾರಿ ಸಾವು ಪ್ರಕರಣ ಎರಡು ರಾಜ್ಯಗಳಿಗೆ ಸಂಬಂಧಿಸಿರುವುದರಿಂದ ಈ ವಿಚಾರದಲ್ಲಿ ಕೇಂದ್ರ
ಮಧ್ಯಪ್ರವೇಶಿಸುವುದಿಲ್ಲ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಮುಖ್ಯಮಂತ್ರಿಗಳು ರಾಜ್ಯದ ಪೊಲೀಸ್‌ ಅಧಿಕಾರಿಗಳ ತಂಡವನ್ನು ಕಳುಹಿಸಿ ತನಿಖೆಗೆ ಕೈಜೋಡಿಸಬೇಕಿತ್ತು. ಅನುರಾಗ್‌ ತಿವಾರಿ ಸಾವಿರಾರು ಕೋಟಿ ರೂ. ಹಗರಣ ಬಯಲಿಗೆಳೆಯಲು ಮುಂದಾಗಿದ್ದರು. 4 ತಿಂಗಳಿನಿಂದ ಅವರಿಗೆ ವೇತನ ನೀಡಿರಲಿಲ್ಲ ಎಂದು ಅವರ ಸಹೋದರ ಆರೋಪಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು.

– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next