“ನನಗೆ ನನ್ನ ಕೃತಿಯಿಂದ ಒಂದು ರೂಪಾಯಿ ಸಂಭಾವನೆ ಬೇಡ. ಆದರೆ, ಈ ಸಿನಿಮಾ ಹೆಚ್ಚು ಜನರಿಗೆ ತಲುಪವಂತಾಗಬೇಕು. ನನ್ನ ಪಾತ್ರವನ್ನು ವಿನಾಕಾರಣ ಹೈಲೆಟ್ ಮಾಡುವುದು ಬೇಡ…’ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ನಿರ್ದೇಶಕ ನಿಖೀಲ್ ಮಂಜು ಅವರಿಗೆ ಹೀಗೆ ಹೇಳಿದ್ದರಂತೆ. ಅವರ ಮಾತಿಗೆ ಬದ್ಧರಾಗಿಯೇ ಸಿನಿಮಾ ಮಾಡುತ್ತಿರುವುದಾಗಿ ಹೇಳುತ್ತಾ ಹೋದರು ನಿಖೀಲ್ ಮಂಜು. ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು “ಐಎಎಸ್ ದಂಪತಿಯ ಕನಸುಗಳು’ ಎಂಬ ಪುಸ್ತಕ ಬರೆದಿದ್ದರು.
ಆ ಪುಸ್ತಕ ಆಧರಿಸಿ, ನಿಖೀಲ್ ಮಂಜು, “ಶಾಲಿನಿ ಐಎಎಸ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ಕೊಟ್ಟಿದ್ದಾಗಿದೆ. ಆ ಬಗ್ಗೆ ನಿಖೀಲ್ ಮಂಜು, ಹೇಳಿದ್ದಿಷ್ಟು: “ಶಾಲಿನಿ ರಜನೀಶ್ ಅವರು ಬರೆದ ಪುಸ್ತಕ ಸಿನಿಮಾ ಆಗುತ್ತಿದೆ. ಒಬ್ಬ ಅಧಿಕಾರಿ ಹೇಗೆಲ್ಲಾ ಸಮಾಜಮುಖೀಯಾಗಿ ಕೆಲಸ ಮಾಡಬಹುದು. ಆ ಮೂಲಕ ಸಮಾಜವನ್ನು ಹೇಗೆ ಬದಲಾಯಿಸಬಹುದು. ಒಂದೊಳ್ಳೆಯ ಸಮಾಜವನ್ನು ಯಾವ ರೀತಿ ಕಟ್ಟಲು ಸಾಧ್ಯ ಎಂಬ ಅಂಶಗಳು ಈ ಚಿತ್ರದ ಹೈಲೈಟ್. 2016ರಲ್ಲಿ ಈ ಪುಸ್ತಕ ಬಂದಾಗ, ಓದಿದ್ದೆ. ಆಗಿನಿಂದಲೂ ನನ್ನ ತಂಡ ಸಿನಿಮಾಗಾಗಿ ಕೆಲಸ ಮಾಡಿತ್ತು. ಅದೀಗ ಚಾಲನೆಗೊಂಡಿದೆ.
ಇಲ್ಲಿ ಶಾಲಿನಿ ಅವರ ಪಾತ್ರಕ್ಕೆ ಸೋನು ಗೌಡ ಆಯ್ಕೆಯಾಗಿದ್ದಾರೆ. ಈ ಹಿಂದೆ ಯಾನ ಅವರ ಆಯ್ಕೆಯಾಗಿತ್ತು. ಕಾರಣಾಂತರದಿಂದ ಅವರು ಮಾಡಲಾಗುತ್ತಿಲ್ಲ. ಶಾಲಿನಿ ಅವರ ಪಾತ್ರವನ್ನು ಇಲ್ಲಿ ಸರಳವಾಗಿ ಬಿಂಬಿಸಲಾಗುತ್ತಿದೆ. ಕಮರ್ಷಿಯಲ್ ಸಿನಿಮಾದ ಟೇಸ್ಟ್ ಜತೆಗೆ ಮನರಂಜನೆಯೂ ಇರಲಿದೆ. ಶಾಲಿನಿ ಅವರಿಗೊಂದು ವ್ಯಕ್ತಿತ್ವ ಇದೆ. ಅವರ ಸರಳ ಬದುಕು ಎಲ್ಲರಿಗೂ ಮಾದರಿಯಾಗಿದೆ. ಅವರ ಪಾತ್ರಕ್ಕೆ ಸಾಕಷ್ಟು ಆಯ್ಕೆಗಳಿದ್ದವು. ಸುಂದರವಾಗಿರಬೇಕು, ಸರಳವಾಗಿ ಕಾಣಬೇಕು.
ಹಾಗಾಗಿ ಅಂತಿಮವಾಗಿ ಸೋನು ಗೌಡ ಆಯ್ಕೆಯಾಗಿದ್ದಾರೆ. “ಇಲ್ಲಿ ಶಾಲಿನಿ ಅವರ ಬಗ್ಗೆ ಗೊತ್ತಿರದ ಅನೇಕ ವಿಷಯಗಳಿವೆ. ಶಾಲಿನಿ ಅವರ ಕುಟುಂಬ ಪಾಕಿಸ್ತಾನದಲ್ಲಿದ್ದು, ಭಾರತಕ್ಕೆ ಬಂದು ಹರಿಯಾಣದ ಗಂಜಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿದ್ದು, ಅವರ ತಂದೆ ಐಎಎಸ್ ಅಧಿಕಾರಿಯಾಗಿದ್ದು, ಶಾಲಿನಿ ಅವರು ಸಹ ಐಎಎಸ್ ಮಾಡಿ, ಆ ನಡುವೆ ಅನುಭವಿಸಿದ ಸಣ್ಣಪುಟ್ಟ ಸಮಸ್ಯೆಗಳು, ಅದನ್ನು ಹೇಗೆಲ್ಲಾ ಮೆಟ್ಟಿ ನಿಂತರು ಎಂಬಿತ್ಯಾದಿ ವಿಷಯಗಳು ಅಡಕವಾಗಲಿವೆ.
ಇಲ್ಲಿ ಸಮಾಜ ಸೇವೆ, ರೊಮ್ಯಾನ್ಸ್, ಫೈಟ್ಸ್ ಎಲ್ಲವೂ ಇದೆ. ಮುಖ್ಯವಾಗಿ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಆದಂತಹ ಸಂದರ್ಭದಲ್ಲಿ, ಶಾಲಿನಿ ಅವರು ಬಂಟ್ವಾಳದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ನಡೆದ ಘಟನೆಯನ್ನು ನಿಭಾಯಿಸಿದ ಬಗೆಯನ್ನು ಇಲ್ಲಿ ತೋರಿಸಲಾಗುತ್ತಿದೆ. ಇನ್ನು, ರಜನೀಶ್ ಅವರ ಮಾತು ಕಡಿಮೆ, ಕೆಲಸ ಜಾಸ್ತಿ. ನಮಗೆ ಸಾಕಷ್ಟು ಸಲಹೆ, ಸೂಚನೆ ಕೊಟ್ಟಿರುವುದರಿಂದ ಸಿನಿಮಾ ಆಗೋಕೆ ಸಾಧ್ಯವಾಗಿದೆ’ ಎಂದು ವಿವರ ಕೊಡುವ ನಿಖೀಲ್ ಮಂಜು, “ಪಾಕಿಸ್ತಾನದಲ್ಲಿ ಸಿನಿಮಾ ನಡೆಯದಿದ್ದರೂ, ಹರಿಯಾಣ, ಬೆಂಗಳೂರು, ಕೋಲಾರ, ಬಂಟ್ವಾಳ ಹಾಗೂ ಬೆಳಗಾವಿಯಲ್ಲಿ ಚಿತ್ರೀಕರಣ ನಡೆಯಲಿದೆ.
ಐದು ಹಂತದಲ್ಲಿ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ’ ಎನ್ನುತ್ತಾರೆ. ಶಾಲಿನಿ ರಜನೀಶ್ ಪಾತ್ರ ಮಾಡುತ್ತಿರುವ ಸೋನು ಗೌಡ ಅವರಿಗೆ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುವ ನಂಬಿಕೆ ಇದೆಯಂತೆ. ಈ ಪಾತ್ರ ಸಿಕ್ಕಿದ್ದು, ಕನಸಾ, ನನಸಾ ಎಂಬ ಗೊಂದಲವಿದೆ. ನಟ-ನಟಿಯರು ಯಾವತ್ತೂ ಇಂಥದ್ದೇ ಪಾತ್ರ ಸಿಗುತ್ತೆ ಅಂತ ಭಾವಿಸಿರುವುದಿಲ್ಲ. ನನಗೊಂದು ಚಾಲೆಂಜಿಂಗ್ ಪಾತ್ರ ಸಿಕ್ಕಿದೆ. ನಾನೊಬ್ಬ ಪರಿಪೂರ್ಣ ನಟಿ ಎನ್ನುವುದನ್ನು ಸಾಬೀತುಪಡಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಅಂದರು ಸೋನು.
ಇನ್ನು, ರಜನೀಶ್ ಅವರ ಪಾತ್ರವನ್ನು ರೋಜರ್ ನಾರಾಯಣ್ ಮಾಡುತ್ತಿದ್ದಾರೆ. ಅವರು ಅಮೆರಿಕದ ಒಂದು ಕಾರ್ಯಕ್ರಮದಲ್ಲಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮಾತಾಡಿದ್ದರಂತೆ. ಅವರ ಎರಡು ನಿಮಿಷದ ಮಾತುಕತೆ ಅವರನ್ನು ತುಂಬಾ ಇಂಪ್ರಸ್ ಮಾಡಿತ್ತಂತೆ. ಈಗ ಅವರು ಬರೆದ ಪುಸ್ತಕ ಚಿತ್ರವಾಗುತ್ತಿದ್ದು, ರಜನೀಶ್ ಪಾತ್ರ ಮಾಡುತ್ತಿರುವುದಕ್ಕೆ ಖುಷಿ ಇದೆ ಎನ್ನುತ್ತಾರೆ ರೋಜರ್.
* ವಿಜಯ್ ಭರಮಸಾಗರ