ಮಂಗಳೂರು: ದೈನಂದಿನ ಪಠ್ಯದ ಜತೆಗೆ ಸಮ್ಮೇಳನ, ನಿರಂತರ ಕಲಿಕಾ ಕಾರ್ಯಕ್ರಮ (ಸಿಎಂಇ)ಗಳು ಅಗತ್ಯವಾಗಿದ್ದು, ಇದರಿಂದ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ. ಪ್ರಾಧ್ಯಾಪಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಹೊಸ ಬೆಳವಣಿಗೆ, ಆವಿಷ್ಕಾರಗಳ ಬಗ್ಗೆ ಅರಿತು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ “ಐಎಒಎಚ್‌ಎನ್‌ಎಸ್ 2024 ಮಂಗಳೂರು’-ಇಂಡಿಯನ್ ಅಕಾಡೆಮಿ ಆಫ್ ಓಟೋರಿನೋಲಾರಿಂಗೋಲಜಿ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯ 10ನೇ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಡಾ| ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಿಗುವ ಅವಕಾಶವನ್ನು ಕೈ ಬಿಟ್ಟರೆ ನಾವೇ ಹಿಂದೆ ಉಳಿಯುತ್ತೇವೆ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲೂ ಅಧುನಿಕ ಆವಿಷ್ಕಾರಗಳನ್ನು ಅರಿತುಕೊಳ್ಳಬೇಕು. ಆ ನಿಟ್ಟಿನಲ್ಲಿ ಕೆಎಂಸಿ ವೈದ್ಯ ಕೀಯ ಕಾಲೇಜು ನಿರಂತರವಾಗಿ ವಿವಿಧ ವಿಭಾಗ ವಿಚಾರಗಳಿಗೆ ಸಂಬಂಧಿಸಿದ ಸಮ್ಮೇಳನ, ಸಿಎಂಇ ಗಳನ್ನು ಆಯೋಜಿಸಿ ತಜ್ಞರನ್ನು ಕರೆಸಿ ಅವರಿಂದ ಉಪನ್ಯಾಸಗಳನ್ನು ಆಯೋಜಿಸುತ್ತಿದೆ ಎಂದರು.
ಐಎಓಎಚ್‌ಎನ್‌ಎಸ್ ಚೇರ್ಮನ್ ಡಾ| ಮೋಹನ್ ಕಾಮೇಶ್ವರಂ ಮಾತನಾಡಿ, ಅಕಾಡೆಮಿ ಹುಟ್ಟು ಹಾಕಿದ ಉದ್ದೇಶಗಳಿಗೆ ಅನುಸಾರವಾಗಿ ಕೆಲಸ ಮಾಡುತ್ತಿದ್ದು, 10 ವರ್ಷ ಗಳಿಂದ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಓಟೋ ರಿನೋಲಾರಿಂಗೋಲಜಿ ಕ್ಷೇತ್ರಕ್ಕೆ ಬರುವ ಯುವ ಸಮು ದಾಯಕ್ಕೆ ತರಬೇತಿ ನೀಡಿ ಅವರನ್ನು ಸಜ್ಜು ಗೊಳಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಇಎನ್‌ಟಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಡಾ| ಇ.ವಿ. ರಮಣ್ ಅವರಿಗೆ ಗೌರವ ಫೆಲೋಶಿಫ್ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಡಾ| ಸುನಿಲ್ ಕೊತ್ವಾಲ್, ಡೀನ್ ಡಾ| ನರೇಶ್ ಪಾಂಡವ್, ಕಾರ್ಯದರ್ಶಿ ಡಾ| ವಿಜಯ್ ಕೃಷ್ಣನ್, ಕೆಎಂಸಿ ಡೀನ್ ಡಾ| ಉಣ್ಣಿಕೃಷ್ಣನ್, ಕೆಎಂಸಿ ಮಂಗಳೂರು ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ದೇವಿಪ್ರಸಾದ್ ಉಪಸ್ಥಿತರಿದ್ದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ| ಎಂ.ಡಿ. ವೆಂಕಟೇಶ್ ಪ್ರಸ್ತಾವಿಸಿ ಸ್ವಾಗತಿಸಿದರು.ಆ. 8ರಂದು ಸಮ್ಮೇಳ ಆರಂಭಗೊಂಡಿದ್ದು, 11ರ ವರೆಗೆ ನಡೆಯಲಿದೆ.
“ಓಟೊರಿನೊಲಾರಿಂಗೋಲಜಿ ಟುವರ್ಡ್ಸ್ ಅಕಾಡೆಮಿಕ್ ಮತ್ತು ರಿಸರ್ಚ್ ಎಕ್ಸಲೆನ್ಸ್ – 2024′ ವಿಷಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ದೇಶವಿದೇಶಗಳ ಸುಮಾರು 400ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ.