ಹೊಸದಿಲ್ಲಿ : ಅಸ್ಸಾಮಿನ ಜೋರ್ಹಾಟ್ ನಿಂದ ನಿನ್ನೆ ಮಂಗಳವಾರ ಮಧ್ಯಾಹ್ನ 12.25 ರ ಸುಮಾರಿಗೆ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿದ್ದ , 15 ಮಂದಿ ಇದ್ದ ಭಾರತೀಯ ವಾಯು ಪಡೆಯ ಸಾರಿಗೆ ವಿಮಾನ ಇಂದು ಮಂಗಳವಾರವೂ ಪತ್ತೆಯಾಗಿಲ್ಲ.
ವಿಮಾನ ಎಲ್ಲಿದೆ, ಎಲ್ಲಿ ಪತನಗೊಂಡಿದೆ ಎಂಬಿತ್ಯಾದಿ ಮಾಹಿತಿಗಳು ಈ ವರೆಗೂ ಅಲಭ್ಯವಾಗಿದ್ದು ವಿಮಾನದ ಅವಶೇಷಗಳು ಕೂಡ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಐಎಎಫ್ ಮೂಲಗಳು ಹೇಳಿವೆ.
ನಾಪತ್ತೆಯಾದ ವಿಮಾನದ ಶೋಧ ಕಾರ್ಯದಲ್ಲಿ ತೊಡಗಿರುವ ಸಿ-130 ಜೆ ವಿಮಾನ ಮತ್ತು ಭಾರತೀಯ ಸೇನಾ ಪಡೆಯ ಭೂಕಾವಲು ದಳದ ಸಿಬಂದಿಗಳು ಈಗಲೂ ತಮ್ಮ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ನಡುವೆ ನಾಪತ್ತೆಯಾಗಿರುವ ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಟ್ಯಾಟೋ ಎಂಬಲ್ಲಿಗೆ ಸಮೀಪ ಕಂಡು ಬಂದಿವೆ ಎಂಬ ವರದಿಗಳನ್ನು ಭಾರತೀಯ ವಾಯು ಪಡೆ ಅಲ್ಲಗಳೆದಿದೆ.
ಅಸ್ಸಾಂ ನ ಜೋರ್ಹಾಟ್ ವಾಯು ನೆಲೆಯಿಂದ ಹೊರಟ ಅರ್ಧ ತಾಸೊಳಗೆ ನಾಪತ್ತೆಯಾಗಿದ್ದ ವಿಮಾನ ತನ್ನ ಮೂಲ ವೇಳಾ ಪಟ್ಟಿಯ ಪ್ರಕಾರ ಅರುಣಾಚಲ ಪ್ರದೇಶದ ಮೆಂಚುಕಾ ವಾಯು ಪಟ್ಟಿಯಲ್ಲಿ ಇಳಿಯುವುದಿತ್ತು. ವಿಮಾನದಲ್ಲಿದ್ದ ಎಲ್ಲ 15 ಮಂದಿ ಐಎಎಫ್ ಸಿಬಂದಿಗಳಾಗಿದ್ದಾರೆ.