ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ನಿನ್ನೆ ಗುರುವಾರ ಮಧ್ಯಾಹ್ನ ನಡೆದಿದ್ದ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಆದಿಲ್ ಅಹ್ಮದ್ ನಡೆಸಿದ ಆತ್ಮಾಹುತಿ ದಾಳಿಗೆ ಬಲಿಯಾದ 44 ಸಿಆರ್‌ಪಿಎಫ್ ಯೋಧರ ಮೃತ ದೇಹಗಳನ್ನು ದಿಲ್ಲಿಗೆ ತರಲು ಭಾರತೀಯ ವಾಯು ಪಡೆ ಸಿ-17 ಗ್ಲೋಬ್ ಮಾಸ್ಟರ್ ಟ್ರಾನ್ಸ್ ಪೋರ್ಟ್ ವಿಮಾನವನ್ನು ಕಳುಹಿಸಲಾಗುತ್ತಿದೆ.
ಈ ವಿಮಾನವು ಹಿಂದೋನ್ ವಾಯು ಪಡೆ ನೆಲೆಯಿಂದ ಶ್ರೀನಗರಕ್ಕೆ ಇನ್ನು ಕೆಲವೇ ಹೊತ್ತಿನಲ್ಲಿ ಹಾರಲಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ ಈ ವಿಶೇಷ ಸಾರಿಗೆ ವಿಮಾನವು ಮೃತ ಸಿಆರ್‌ಪಿಎಫ್ ಯೋಧರ ಪಾರ್ಥಿವ ಶರೀರಗಳನ್ನು ಹೊಸದಿಲ್ಲಿಗೆ ತರಲಿದೆ. ಅಲ್ಲಿಂದ ಯೋಧರ ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕಾಗಿ ಅವರವರ ಹುಟ್ಟೂರಿಗೆ ರವಾನಿಸಲಾಗುತ್ತದೆ.
ಇಂದು ಮೃತ ಸಿಆರ್‌ಪಿಎಫ್ ಯೋಧರ ಪಾರ್ಥಿಕ ಶರೀರಗಳು ದಿಲ್ಲಿಗೆ ಬಂದೊಡನೆ PM ಮೋದಿ ಮತ್ತು ಇತರ ಅನೇಕ ಕೇಂದ್ರ ಸಚಿವರು ಮತ್ತು ಉನ್ನತ ರಾಜಕೀಯ ನಾಯಕರು ಅಂತಿಮ ನಮನ, ಶ್ರದ್ಧಾಂಜಲಿ ಅರ್ಪಿಸುವರು. ಆ ಸಂದರ್ಭದಲ್ಲಿ ದೇಶದ ಭೂ, ವಾಯು ಮತ್ತು ನೌಕಾಪಡೆಯ ಮುಖ್ಯಸ್ಥರು ಹುತಾತ್ಮ ಯೋಧರಿಗೆ ವಿಧ್ಯುಕ್ತ ಸೇನಾ ಗೌರವವನ್ನು ಸಲ್ಲಿಸುವರು.
ಈ ನಡುವೆ ಆಳುವ ಬಿಜೆಪಿ ತನ್ನ ಎಲ್ಲ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮಗಳೂ ಸೇರಿವೆ ಎಂದು ವರದಿಗಳು ತಿಳಿಸಿವೆ.