ಹೊಸದಿಲ್ಲಿ : ”ರಫೇಲ್ ಫೈಟರ್ ಜೆಟ್ ವಿಮಾನಗಳು ಸುಂದರ ಮತ್ತು ಸಮರ್ಥ; ನಾವದನ್ನು ಕಾಯುತ್ತಿದ್ದೇವೆ ” ಎಂದು ಭಾರತದ ವಾಯು ಪಡೆಯ ಮುಖ್ಯಸ್ಥ, ವೈಸ್ ಚೀಫ್ ಏರ್ ಮಾರ್ಶಲ್ ಎಸ್ ಬಿ ದೇವ್ ಹೇಳಿದ್ದಾರೆ.
ಹಿಂದಿನ ಯುಪಿಎ ಸರಕಾರ ಕುದುರಿಸಿದ್ದಕ್ಕಿಂತಲೂ 300 ಪಟ್ಟು ಹೆಚ್ಚು ಬೆಲೆಗೆ ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸುತ್ತಿರುವುದರಲ್ಲಿ ಏನೋ ಭ್ರಷ್ಟಾಚಾರ ಅಡಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ನಡುವೆಯೇ ವಾಯ ಪಡೆ ಮುಖ್ಯಸ್ಥ ದೇವ್ ಅವರಿಂದ ಇಂದು ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.
ಹಾಗಿದ್ದರೂ ಏರ್ ಮಾರ್ಶಲ್ ದೇವ್ ಅವರು ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಪ್ರಕೃತ ಜಾರಿಯಲ್ಲಿರುವ ರಾಜಕೀಯ ಆರೋಪ-ಪ್ರತ್ಯಾರೋಪಗಳ ವಾಗ್ಧಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
“ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬಾರದು; ಆದರೆ ರಫೇಲ್ ಬಗ್ಗೆ ಚರ್ಚೆ, ಆರೋಪ ಇತ್ಯಾದಿಗಳೆಲ್ಲ ಈಗ ನಡೆಯುತ್ತಿವೆ; ಏಕೆಂದರೆ ನಮಗೆ ಎಲ್ಲದರ ಬಗ್ಗೆ ನಮಗೆ ಎಲ್ಲವೂ ಗೊತ್ತಿದೆ ಎಂಬ ಭಾವನೆ ಇದೆ; ಆದರೂ ಜನರಿಗೆ ಮಾತ್ರ ಯಾವುದೇ ಮಾಹಿತಿ ಇರುವುದಿಲ್ಲ’ ಎಂದು ಏರ್ ಮಾರ್ಶಲ್ ದೇವ್ ಹೇಳಿದರು.
36 ರಫೇಲ್ ಫೈಟರ್ ಜೆಟ್ ವಿಮಾನಗಳ ಖರೀದಿ ಸಂಬಂಧವಾಗಿ ಭಾರತ ಮತ್ತು ಫ್ರಾನ್ಸ್ ಸರಕಾರದ ನಡುವೆ ಕುದರಿರುವ ವ್ಯವಹಾರದ ಬಗ್ಗೆ ಈಗಾಗಲೇ ಉಭಯ ದೇಶಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.