ನವದೆಹಲಿ: ಗಡಿ ವಿವಾದದ ಬಿಕ್ಕಟ್ಟು ಮುಂದುವರಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮಂಗಳವಾರ ಅಧಿಕೃತವಾಗಿ ದೇಶಿ ಲಘು ಯುದ್ಧ ವಿಮಾನ (ಎಲ್ ಸಿಎ) ಹಾಗೂ ತೇಜಸ್ ಯುದ್ಧ ವಿಮಾನವನ್ನು ಪಶ್ಚಿಮ ಗಡಿಯಲ್ಲಿ ನಿಯೋಜಿಸುವ ಮೂಲಕ ಚೀನಾ ಮತ್ತು ಪಾಕ್ ಗೆ ಸಡ್ಡು ಹೊಡೆದಿರುವುದಾಗಿ ವರದಿ ತಿಳಿಸಿದೆ.
ಲಡಾಖ್ ಗಡಿಯಲ್ಲಿನ ಹಲವು ಪೋಸ್ಟ್ ಗಳಲ್ಲಿ ಸೇನೆಯನ್ನು ಹಿಂತೆಗೆಯಲು ಚೀನಾ ನಿರಾಕರಿಸುವ ಮೂಲಕ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮುಂದುವರಿದಿದೆ. ಏತನ್ಮಧ್ಯೆ ಭಾರತ ಕೂಡಾ ಆಯ್ದ ಸ್ಥಳಗಳಲ್ಲಿ ಸರ್ವ ಸನ್ನದ್ಧವಾಗುತ್ತಿರುವುದಾಗಿ ವರದಿ ವಿಶ್ಲೇಷಿಸಿದೆ.
ಎಲ್ ಸಿಎ ತೇಜಸ್ ಸ್ಕ್ವಾಡ್ರನ್, 45 ಸ್ಕ್ವಾಡ್ರನ್ ಅನ್ನು ಪಶ್ಚಿಮಭಾಗದ ಪಾಕಿಸ್ತಾನ ಗಡಿ ಸಮೀಪಕ್ಕೆ ಭಾರತೀಯ ವಾಯುಪಡೆ ರವಾನಿಸಿರುವುದಾಗಿ ವರದಿ ತಿಳಿಸಿದೆ. ದಕ್ಷಿಣ ಏರ್ ಕಮಾಂಡ್ ನ ಸುಪರ್ದಿಯಲ್ಲಿರುವ ಎಲ್ ಸಿಎ ತೇಜಸ್ ಯುದ್ಧ ವಿಮಾ 45 ಸ್ಕ್ವಾರ್ಡನ್ ಅನ್ನು ಪಶ್ಚಿಮ ಲಡಾಖ್ ಗಡಿಯಲ್ಲಿಯೂ ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ.
ದೇಶೀಯವಾಗಿ ನಿರ್ಮಾಣವಾಗಿದ್ದ ತೇಜಸ್ ಯುದ್ಧ ವಿಮಾನದ ಸಾಮರ್ಥ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು 74ನೇ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಹೊಗಳಿದ್ದರು. ಅಲ್ಲದೇ ತೇಜಸ್ ನ ನೂತನ ತಂತ್ರಜ್ಞಾನದ (ಎಲ್ ಸಿಎ ಮಾರ್ಕ್ 1ಎ) ವಿಮಾನ ಖರೀದಿಯ ಒಪ್ಪಂದವನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು.
ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯ 83 ಮಾರ್ಕ್ 1ಎ ವಿಮಾನ ಖರೀದಿಯ ಒಪ್ಪಂದವನ್ನು ಈ ವರ್ಷದ ಅಂತ್ಯದ ವೇಳೆಗೆ ಅಂತಿಮಗೊಳಿಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ಗಡಿಯಲ್ಲಿ ಚೀನಾದ ಸಂಘರ್ಷ ಮುಂದುವರಿದ ನಿಟ್ಟಿನಲ್ಲಿ ಚೀನಾ ಮತ್ತು ಪಾಕಿಸ್ತಾನದ ಗಡಿಭಾಗಕ್ಕೆ ಐಎಎಫ್ ತೇಜಸ್ ಯುದ್ಧ ವಿಮಾನ ರವಾನಿಸಿರುವುದಾಗಿ ವರದಿ ಹೇಳಿದೆ.