ಬಿಹಾರ: ಪ್ರವಾಹ ಪೀಡಿತ ಬಿಹಾರಕ್ಕೆ ಪರಿಹಾರ ಕಿಟ್ ಒದಗಿಸಲು ಬಂದಿದ್ದ ವಾಯುಪಡೆ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪ್ರವಾಹದ ನೀರಿನಲ್ಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬುಧವಾರ(ಅ.2) ರಂದು ನಡೆದಿದೆ.
ಹೆಲಿಕಾಪ್ಟರ್ ನಲ್ಲಿ ಇಬ್ಬರು ಸಿಬಂದಿಗಳು ಸೇರಿ ಒಟ್ಟು ನಾಲ್ವರು ಇದ್ದರು ಎನ್ನಲಾಗಿದ್ದು ಅದೃಷ್ಟವಶಾತ್ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಕೆಲ ದಿನಗಳಿಂದ ಬಿಹಾರದ ಕೆಲ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಪರಿಣಾಮ ಹಲವು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ ಈ ನಿಟ್ಟಿನಲ್ಲಿ ಇಂದು (ಬುಧವಾರ) ವಾಯುಪಡೆ ಹಲಿಕಾಪ್ಟರ್ ಮೂಲಕ ತುರ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಬಿಹಾರದ ಮುಜಾಫರ್‌ಪುರಕ್ಕೆ ತೆರಳುತ್ತಿದ್ದ ಸಮಯದಲ್ಲಿ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಈ ವೇಳೆ ಪೈಲೆಟ್ ಹೆಚ್ಚಿನ ಅವಘಡ ತಪ್ಪಿಸಲು ಪ್ರವಾಹದ ನೀರಿನಲ್ಲೇ ಹೆಲಿಕಾಪ್ಟರ್ ತುರ್ತು ಲ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿದ ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಬುಧವಾರ ಮಧ್ಯಾಹ್ನ ಹೆಲಿಕಾಪ್ಟರ್ ದರ್ಭಾಂಗಾ ವಾಯುನೆಲೆಯಿಂದ ಟೇಕಾಫ್ ಆಗಿದ್ದು ಮುಜಾಫರ್‌ಪುರಕ್ಕೆ ಬರುತ್ತಿದ್ದಂತೆ ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ ಈ ವೇಳೆ ಸಮಯಪ್ರಜ್ಞೆ ಮೆರೆದ ಪೈಲೆಟ್ ಹೆಲಿಕಾಪ್ಟರನ್ನು ಪ್ರವಾಹದ ನೀರಿನಲ್ಲಿ ಇಳಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ ಎಂದು ಪೈಲೆಟ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುರ್ತು ಭೂಸ್ಪರ್ಶದ ಬಳಿಕ ಹೆಲಿಕಾಪ್ಟರ್ ನಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ನಾಲ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.