Advertisement

ರಕುತದೆ ಬರೆದೆನು ಇದ ನಾನು…

09:41 PM Feb 14, 2020 | Lakshmi GovindaRaj |

ಸಂಗಮೇಶ ಅವರು ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರವನ್ನು ನೆತ್ತರಿನ ಮೂಲಕವೇ ಚಿತ್ರಿಸಿರುವುದು ವಿಶೇಷ…

Advertisement

ಕಲೆ- ಸಾಹಿತ್ಯದ ಗುಣ ರಕ್ತದಿಂದ ಬರುತ್ತೆ ಎನ್ನುವ ಮಾತುಂಟು. ಇದು ಎಷ್ಟು ವಾಸ್ತವವೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ಕಲಾವಿದರಿಗೆ ಕಲೆ ಒಲಿದಿದ್ದು ರಕ್ತದ ಮೂಲಕ. ಇವರು ನೂರಾರು ಸಾಧಕರ ಚಿತ್ರ ಬಿಡಿಸುವುದು ಕೂಡ ತಮ್ಮ ನೆತ್ತರಿನಿಂದಲೇ. ರಬಕವಿ- ಬನಹಟ್ಟಿ ತಾಲೂಕಿನ ಹೊಸೂರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ಸಂಗಮೇಶ ಬಗಲಿ ಅವರ ರಕ್ತಚಿತ್ರ ಚರಿತ್ರೆ ಈ ಪರಿಯದ್ದು.

ಚಿತ್ರ ಬಿಡಿಸಬೇಕೆಂಬ ಹುಕೀ ಬಂದಾಗ, ಇವರು ಹೋಗುವುದು ಸೀದಾ ವೈದ್ಯರ ಬಳಿ. ವೈದ್ಯರ ಸಲಹೆಯಂತೆ, ಒಂದೆರಡು ಸಿರಿಂಜ್‌ ನಲ್ಲಿ 10 ರಿಂದ 15 ಎಂ.ಎಲ್‌. ರಕ್ತ ತೆಗೆಸಿ ಕೊಳ್ಳುತ್ತಾರೆ. ಆ ರಕ್ತ ಹೆಪ್ಪುಗಟ್ಟದೆ ಇರಲಿ ಯೆಂಬ ಕಾರಣಕ್ಕೆ ಅದಕ್ಕೆ ರಕ್ತ ಪರೀಕ್ಷಾ ಘಟಕದಲ್ಲಿ ಕೊಡುವ “ಇಡಿಟಿಎ’ ಎಂಬ ಲಿಕ್ವಿಡ್‌ ಅನ್ನು ಬೆರೆಸುತ್ತಾರೆ. ಒಂದು ಚಿತ್ರಕ್ಕೆ ಏನಿಲ್ಲವೆಂದರೂ ಕನಿಷ್ಠ 10 ಎಂ.ಎಲ್‌. ರಕ್ತ ಬೇಕು. ಒಟ್ಟಾರೆ, 3 ತಿಂಗಳಲ್ಲಿ ಚಿತ್ರಕ್ಕಾಗಿಯೇ ಇವರು ಮಾಡುವ ರಕ್ತದಾನ ಸುಮಾರು 300 ಎಂ.ಎಲ್‌.ನಷ್ಟು!

ಜಲವರ್ಣ, ತೈಲವರ್ಣ, ಆಕ್ರೆಲಿಕ್‌, ವ್ಯಾಕ್ಸ್‌ ಕಲರನ್ನು ಮಾಧ್ಯಮವನ್ನಾಗಿಸಿ­ಕೊಂಡಿರುವ ಸಂಗಮೇಶ ಅವರಿಗೆ ಚಿಕ್ಕಂದಿಂನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಇವರು ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರ ಬಿಡಿಸಿದ ಖ್ಯಾತಿ ಇವರದ್ದು.

ಈ ಸಾಧನೆಗಾಗಿ ಇವರಿಗೆ ಅಮೆರಿಕದ ವಿವಿಯೊಂದರಿಂದ ಗೌರವ ಡಾಕ್ಟರೇಟ್‌ ಲಭಿಸಿದೆ. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್, ಜೀನಿಯಸ್‌ ಬುಕ್‌ ಆಫ್‌ ರೆಕಾರ್ಡ್ಸ್ ನಿಂದ ಮೆಚ್ಚುಗೆ ಸಿಕ್ಕಿದೆ. ಜಮಖಂಡಿಯಲ್ಲಿನ ತಮ್ಮ ಮನೆಯಲ್ಲಿಯೇ ಪುಟ್ಟ ಗ್ಯಾಲರಿ ನಿರ್ಮಿಸಿಕೊಂಡು, ರಕ್ತವರ್ಣಕಲೆಯನ್ನು ತಪಸ್ಸಿನಂತೆ ಆಚರಿಸುತ್ತಿ­ದ್ದಾರೆ. ನವದೆಹಲಿ, ಬೆಂಗ­ ಳೂರು, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿದಂತೆ 25ಕ್ಕೂ ಹೆಚ್ಚು ಕಡೆಗಳಲ್ಲಿ ರಕ್ತವರ್ಣ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ.

Advertisement

ದೇಶಪ್ರೇಮದ ಕುರಿತು ಕೇವಲ ಮಾತಿನಲ್ಲಿ ಹೇಳುವುದರ ಬದಲು, ರಕ್ತವರ್ಣಚಿತ್ರದಿಂದ ದೇಶಭಕ್ತಿಯನ್ನು ಸಾರುತ್ತಿದ್ದೇನೆ. ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ನನ್ನ ರಕ್ತದ ಒಂದು ಪಾಲು ಹೋಗಲಿ ಎಂದು ಇಂಥ ಸಾಧಕರ ಚಿತ್ರಗಳನ್ನು ಬಿಡಿಸಿದ್ದೇನೆ.
-ಡಾ. ಸಂಗಮೇಶ ಬಗಲಿ

* ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next