Advertisement

ಸಿಎಂ ಸ್ಪರ್ಧಿಸಿದರೆ ಗೆಲ್ಲಿಸ್ತೇನೆ

06:20 AM Apr 18, 2018 | Team Udayavani |

ಬಾದಾಮಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನಗೆ ಗಾಡ್‌ ಫಾದರ್‌. ಅವರ ಹೋರಾಟ, ಸಮಾಜ ಸೇವೆ, ರಾಜಕೀಯ ಮೂಲಕ ಜನರಿಗಾಗಿ ತೋರುವ ಕಾಳಜಿ ನೋಡಿಯೇ ನಾನೂ ರಾಜಕೀಯಕ್ಕೆ ಬಂದವನು. ನಾನು ನನ್ನ ರಾಜಕೀಯದಲ್ಲಿ ಗೌರವದಿಂದ ಕಾಣುವ ವ್ಯಕ್ತಿಗಳಲ್ಲಿ ಅವರು ಎತ್ತರದ ಸ್ಥಾನದಲ್ಲಿದ್ದಾರೆ ಎಂದು ಬಾದಾಮಿ ಕ್ಷೇತ್ರದ ಕಾಂಗ್ರೆಸ್‌ನ ಘೋಷಿತ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಹೇಳಿದರು.

Advertisement

“ಉದಯವಾಣಿ’ ಜತೆ ಮಾತನಾಡಿದ ಅವರು, ಈ ಬಾರಿ ನನ್ನ ಟಿಕೆಟ್‌ ಬದಲಾವಣೆ ಆಗಲ್ಲ. ಬಿ ಫಾರಂ ತಡೆ ಹಿಡಿದಿರುವ ಕಾರಣ ನನಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದೇನೆ.

ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. 10 ವರ್ಷಗಳಿಂದ ಬಾದಾಮಿಯಲ್ಲೇ ವಾಸವಾಗಿದ್ದೇನೆ. ವೈದ್ಯಕೀಯ ವೃತ್ತಿ ಜತೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಕೈಲಾದಷ್ಟು ಬಡವರ ಸೇವೆ ಮಾಡುತ್ತಿದ್ದೇನೆ. ಕಪ್ಪು ಚುಕ್ಕೆ ಇಲ್ಲದ ನನಗೆ ಟಿಕೆಟ್‌ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಸಿಎಂ ಬಂದರೆ ಸ್ವಾಗತ: 2013ರಲ್ಲಿ ನನಗೆ ಪಕ್ಷದ ಟಿಕೆಟ್‌ ಕೊಡಲಾಗಿತ್ತು. ಆದರೆ, ಎರಡು ಬಾರಿ ಸೋತಿದ್ದ ಬಿ.ಬಿ. ಚಿಮ್ಮನಕಟ್ಟಿ ಅವರು, ಇದು ನನ್ನ ಕೊನೆ ಚುನಾವಣೆ. ಈ ಬಾರಿ ನನಗೆ ಕೊಡಿ ಎಂದು ಪಟ್ಟು ಹಿಡಿದಿದ್ದರು. ಆಗ ಪರಮೇಶ್ವರ ಮತ್ತು ಸಿದ್ದರಾಮಯ್ಯ ಅವರು ಇದೊಂದು ಬಾರಿ ಚಿಮ್ಮನಕಟ್ಟಿಗೆ ಕೊಡೋಣ ಎಂದು ಮನವೊಲಿಸಿದ್ದರು. ನನ್ನ ನಾಯಕರು ಮತ್ತು ಪಕ್ಷದ ಹಿರಿಯರ ಮಾತಿಗೆ ಗೌರವ ನೀಡಿ ಟಿಕೆಟ್‌ ಬಿಟ್ಟುಕೊಟ್ಟಿದ್ದೆ. ಬಳಿಕ ಚಿಮ್ಮನಕಟ್ಟಿ ಅವರ ಗೆಲುವಿಗೆ ನಾನೂ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೆ. ಈ ಬಾರಿ ನಾನು
ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

ಟಿಕೆಟ್‌ ಬದಲಾವಣೆ ಸಾಧ್ಯವೇ ಇಲ್ಲ ಎಂಬ ವಿಶ್ವಾಸವಿದೆ. ಕೊನೆ ಗಳಿಗೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸಿಎಂ ಸ್ಪರ್ಧೆಗೆ ನಿರ್ಧರಿಸಿದರೂ ನಾನು ಅವರನ್ನು ಸ್ವಾಗತಿಸುತ್ತೇನೆ. ಅವರು ನಾಮಪತ್ರ ಸಲ್ಲಿಸಿದರೆ ಸಾಕು ಕ್ಷೇತ್ರದಲ್ಲಿ ಓಡಾಡಿ ನಾವು ಗೆಲ್ಲಿಸುತ್ತೇವೆ ಎಂದರು.

Advertisement

ಚಿಮ್ಮನಕಟ್ಟಿ ನಮ್ಮ ಹಿರಿಯರು: ಹಾಲಿ ಶಾಸಕ ಚಿಮ್ಮನಕಟ್ಟಿ ಅವರು ಪಕ್ಷದ ಹಾಗೂ ನಮ್ಮ ಹಿರಿಯ ನಾಯಕರು. 40 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದು, ನಮಗೆಲ್ಲ ಮಾದರಿಯಾಗಿದ್ದಾರೆ. ನನಗೆ ಟಿಕೆಟ್‌ ಸಿಕ್ಕ ಹಿನ್ನೆಲೆಯಲ್ಲಿ ಅವರಿಗೆ ಸ್ವಲ್ಪ ಅಸಮಾಧಾನ ಆಗಿರಬಹುದು. ಆದರೆ, ನಾನು ಅವರ ಬಳಿಗೆ ಹೋಗಿ ಕಾಲು ಹಿಡಿದು, ನಾನೂ ನಿಮ್ಮ ಮಗನಂತೆ. ನನಗೆ ಆಶೀರ್ವಾದ ಮಾಡಿ ಎಂದು ಕೇಳುತ್ತೇನೆ. ಅವರು ಎಷ್ಟು ಕಠೊರವೋ, ಅಷ್ಟೇ ಮೃದು ಸ್ವಭಾವದವರು. ತಮಗೆ ಬೆಂಬಲ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಸ್ಪತ್ರೆ ಉದ್ಘಾಟಿಸಿ ರಾಜಕೀಯಕ್ಕೆ ಬಾ ಎಂದಿದ್ದ ಸಿಎಂ
ಡಾ.ದೇವರಾಜ ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ಆಪ್ತ.ಅಲ್ಲದೇ ಬಾಗಲಕೋಟೆಯ ಎಚ್‌.ವೈ. ಮೇಟಿ ಕೂಡ ಇವರ ಸಂಬಂಧಿ. ಸಿಎಂ ಮತ್ತು ಡಾ.ದೇವರಾಜಒಂದೇಸಮಾಜದವರಾಗಿದ್ದು, ಸುಮಾರು 20 ವರ್ಷಗಳಿಂದ ಸಿಎಂ ಶಿಷ್ಯರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಡಾ.ದೇವರಾಜ ಪಾಟೀಲ, ಖಾಸಗಿ ಆಸ್ಪತ್ರೆಯನ್ನು ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು. ಆಗಲೇ ಡಾ.ದೇವರಾಜ ನಿನಗೂ ರಾಜಕೀಯದಲ್ಲಿ ಭವಿಷ್ಯ ಇದೆ. ಸಕ್ರಿಯನಾಗು ಎಂದು ಹೇಳಿದ್ದರು.

ನನ್ನ ತಂದೆ-ತಾಯಿ ಊರು ನಿಂಬಲಗುಂದಿ (ಹುನಗುಂದ ತಾಲೂಕು, ಮೊದಲು ಗುಳೇದಗುಡ್ಡ ಕ್ಷೇತ್ರದಲ್ಲಿತ್ತು). ಆದರೆ, ನಾನು ಹುಟ್ಟಿದ್ದು ಬಾದಾಮಿ ತಾಲೂಕು ಪಟ್ಟದಕಲ್ಲಿನಲ್ಲಿ. ಪಟ್ಟದಕಲ್ಲಿನ ಗುಡೂರ ಮನೆತನದಲ್ಲೇ ನಾನು ಬೆಳೆದವನು. ಗುಳೇದಗುಡ್ಡ, ಬಾಗಲಕೋಟೆಯಲ್ಲಿ ಆಸ್ಪತ್ರೆ ಇವೆ. ಬಾದಾಮಿಯಲ್ಲಿ ಸಹಕಾರಿ ಸಂಘ ಇದೆ. ಇಲ್ಲಿಯೇ ಹಲವು ವರ್ಷ ವೈದ್ಯಕೀಯ ವೃತ್ತಿ ಮಾಡಿದ್ದೇನೆ. ಹೀಗಾಗಿ ನಾನು ಹೇಗೆ ಹೊರಗಿನವನಾಗುತ್ತೇನೆ?
–  ಡಾ.ದೇವರಾಜ ಪಾಟೀಲ, ಬಾದಾಮಿ
ಕ್ಷೇತ್ರದ ಘೋಷಿತ ಕಾಂಗ್ರೆಸ್‌ ಅಭ್ಯರ್ಥಿ

ಸಂದರ್ಶನ – ಶಶಿಧರ ವಸ್ತ್ರದ

Advertisement

Udayavani is now on Telegram. Click here to join our channel and stay updated with the latest news.

Next