ಕೆ.ಆರ್.ಪೇಟೆ: ಏಪ್ರಿಲ್ 18ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡಿದ್ದು, ನಾನು ಈಗಾಗಲೇ ಎರಡು ಲಕ್ಷ ಮತಗಳ ಅಂತರದಲ್ಲಿ ಗೆದ್ದಾಗಿದೆ, 23ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಬೇಕಾಗಿದೆ ಅಷ್ಟೇ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶಾಸಕ ನಾರಾಯಣಗೌಡರ ನಿವಾಸದಲ್ಲಿ ಯೋಜಿಸಿದ್ದ ಪುರಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. ಜೊತೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಶಾಸಕರು ಮತ್ತು ಕಾರ್ಯಕರ್ತರು ಸುಮಾರು ಒಂದೂವರೆ ತಿಂಗಳು ತುಂಬಾ ಶ್ರಮ ಹಾಕಿ ಪ್ರಚಾರ ಮಾಡಿದ್ದಾರೆ. ಅವರ ಶ್ರಮದಿಂದ ನಾನು ಕನಿಷ್ಠ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಿದೆ. ಇದರ ಜೊತೆಗೆ ನಾವು ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿದ್ದೇವೆ. ಮಂಡ್ಯದಲ್ಲಿಯೂ ಮೈತ್ರಿಧರ್ಮ ಪಾಲಿಸಿ ಸಹಕರಿಸಿದ್ದಾರೆ ಎಂದು ನಾನು ನಂಬಿದ್ದೇನೆ. ನನಗಾಗಿ ದುಡಿದ ಸಚಿವರು, ಶಾಸಕರು, ಎಂಎಲ್ಸಿಗಳು, ಮುಖಂಡರು, ಕಾರ್ಯಕರ್ತರು, ಮತದಾರರಿಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಹೇಳಿದರು.
ಮಂಡ್ಯದಲ್ಲೇ ನೆಲೆಸುತ್ತೇನೆ: ನಾನು ಚುನಾವಣಾ ಪೂರ್ವದಲ್ಲಿ ಮಂಡ್ಯದಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ನೆಲೆಸುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ ನಾನು ಮಂಡ್ಯದಲ್ಲಿ ನೆಲೆಸಲು ಸಿದ್ದನಿದ್ದೇನೆ. ಆದರೆ ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡುವುದಿಲ್ಲ. ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡು ಜಿಲ್ಲೆಯಲ್ಲಿ ಇರುತ್ತೇನೆ. ಆದರೆ ಮನೆಯನ್ನು ಒಂದು ತೋಟದಲ್ಲಿ ನಿರ್ಮಾಣ ಮಾಡಬೇಕು ಎಂದುಕೊಂಡಿರುವೆ. ಅದಕ್ಕಾಗಿ ಸೂಕ್ತ ಸ್ಥಳದಲ್ಲಿ ತೋಟ ನಿರ್ಮಾಣ ಮಾಡಲು ಸ್ಥಳ ಹುಡುಕುತ್ತಿದ್ದೇನೆ.
ಆರು ತಿಂಗಳ ಒಳಗಾಗಿ ಮನೆ ನಿರ್ಮಾಣ ಮಾಡಿ ಮಂಡ್ಯದಲ್ಲಿಯೆ ವಾಸ್ತವ್ಯ ಹೂಡುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಸಚಿವ ಪುಟ್ಟರಾಜು, ಜಿಪಂ ಸದಸ್ಯ ಬಿ.ಎಲ್.ದೇವರಾಜ್, ಮುಖಂಡ ಕೆ.ಶ್ರೀನಿವಾಸ್ ಹಾಗೂ ಪುರಸಭಾ ಚುನಾವಣೆಯಲ್ಲಿ ಸ್ವರ್ಧೆಗೆ ಸಿದ್ದರಾಗಿರುವ ಆಕಾಂಕ್ಷಿಗಳು ಸೇರಿದೆಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.