ಹೊಸದಿಲ್ಲಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಅಂತಿಮ ಪಂದ್ಯಕ್ಕೆ ಕ್ರೀಡಾ ಅಭಿಮಾನಿಗಳು ಕಾಯುತ್ತಿದ್ದಾರೆ. ಕೂಟದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ತಲುಪಿರುವ ಭಾರತ ತಂಡ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಈ ಅಂತಿಮ ಮುಖಾಮುಖಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆ, ಆಸ್ಟ್ರೋಟಾಕ್‌ನ ಸಿಇಒ ಪುನೀತ್ ಗುಪ್ತಾ ಅವರು ಭಾರತ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದರೆ ಆಸ್ಟ್ರೋಟಾಕ್ ಬಳಕೆದಾರರಿಗೆ 100 ಕೋಟಿ ರೂ. ಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ಲಿಂಕ್ ಡಿನ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪುನೀತ್ ಗುಪ್ತಾ ಅವರು, 2011 ರಲ್ಲಿ ಭಾರತ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿದ್ದೆ, ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದು” ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
“ಕಳೆದ ಬಾರಿ ನನ್ನ ಸಂತೋಷವನ್ನು ಹಂಚಿಕೊಳ್ಳಲು ನಾನು ಕೆಲವು ಸ್ನೇಹಿತರನ್ನು ಹೊಂದಿದ್ದೆ. ಆದರೆ ಈ ಬಾರಿ ನಾವು ಸ್ನೇಹಿತರಂತೆ ಆಸ್ಟ್ರೋಟಾಕ್ ಬಳಕೆದಾರರನ್ನು ಹೊಂದಿದ್ದೇವೆ. ಆದ್ದರಿಂದ ಅವರೊಂದಿಗೆ ನನ್ನ ಸಂತೋಷವನ್ನು ಹಂಚಿಕೊಳ್ಳಲು ನಾನು ಏನನ್ನಾದರೂ ಮಾಡಬೇಕು” ಎಂದು ಅವರು ಹೇಳಿದರು.
“ಆದ್ದರಿಂದ, ಇಂದು ಬೆಳಿಗ್ಗೆ ನಾನು ನನ್ನ ಹಣಕಾಸು ತಂಡದೊಂದಿಗೆ ಮಾತನಾಡಿದ್ದೇನೆ. ಭಾರತವು ವಿಶ್ವಕಪ್ ಗೆದ್ದರೆ ನಮ್ಮ ಬಳಕೆದಾರರಿಗೆ ಅವರ ವಾಲೆಟ್ ಗಳಲ್ಲಿ 100 ಕೋಟಿ ರೂ ವಿತರಿಸುವುದಾಗಿ ವಾಗ್ದಾನ ಮಾಡಿದ್ದೇನೆ” ಎಂದು ಹೇಳಿದರು.
“ಭಾರತಕ್ಕಾಗಿ ಪ್ರಾರ್ಥಿಸೋಣ, ಬೆಂಬಲಿಸೋಣ ಮತ್ತು ಹುರಿದುಂಬಿಸೋಣ. Indiaaaaa India!!” ಎಂದು ಪುನೀತ್ ಗುಪ್ತಾ ಹೇಳಿದರು.