ರಾಮನಗರ: ಡಿಕೆ ಶಿವಕುಮಾರ್ ಸಿಎಂ ಆದರೆ ನಮ್ಮ ಬೆಂಬಲ ಎಂದು ನಾನು ವ್ಯಂಗ್ಯವಾಗಿಯೇ ಹೇಳಿರುವುದು. ದಿನಾ ನೀವು ಬನ್ನಿ, ನೀವು ಬನ್ನಿ ಎಂದು ಎಲ್ಲರನ್ನೂ ಕರೆಯುತ್ತಿದ್ದಾರೆ. ಮುಖ್ಯಮಂತ್ರಿಗಳೇ ಕನಿಷ್ಠ 50 ಜನನ್ನಾದರೂ ಪಕ್ಷಕ್ಕೆ ಕರೆ ತರಬೇಕೆಂದು ಅವರ ಪಕ್ಷದ ಶಾಸಕರಿಗೆ ಹೇಳಿದ್ದಾರೆ. ಪ್ರತಿ ನಿತ್ಯ ನಮ್ಮ ಎಂಎಲ್ ಎ ಗಳ ಮನೆ ಮುಂದೆ ಯಾಕೆ ಹೋಗುತ್ತೀರಿ? ಒಳ್ಳೆ ಕೆಲಸ ಮಾಡುತ್ತೀರಿ ಎಂದಾದರೆ ಎಲ್ಲರನ್ನೂ ಕಳಿಹಿಸುತ್ತೇನೆ. ಕರೆದುಕೊಂಡು ಹೋಗಿ ಅಂತ ಹೇಳಿದ್ದೀನಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಾದ ಮೇಲೆ ಬಿಜೆಪಿ-ಜೆಡಿಎಸ್ ಈ ರಾಜ್ಯದಲ್ಲಿ ಇರುವುದೇ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಮೊನ್ನೆ ಹೇಳಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಾದ ಮೇಲೆ ಈ ರಾಜ್ಯದಲ್ಲಿ ಮಾತ್ರ ಅಲ್ಲ. ಈ ದೇಶದಲ್ಲಿ ಕಾಂಗ್ರೆಸ್ ಇರುತ್ತಾ ಯೋಚನೆ ಮಾಡಲಿ ಎಂದು ಟಾಂಗ್ ನೀಡಿದರು.
ಬೆಂಗಳೂರಿನ ಸರ್ಕಾರಿ ಅಧಿಕಾರಿ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದಲ್ಲಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ರಕ್ಷಣೆಯಿಲ್ಲ. ರಾಜ್ಯದ ಹಿರಿಯ ಅಧಿಕಾರಿಯನ್ನು ಮನೆಗೆ ಹೋಗಿ ಹತ್ಯೆ ಮಾಡಿದ್ದಾರೆ. ಇಂತಹ ಉದ್ಧಟತನ ತೋರುವ ಕೆಲಸವಾಗುತ್ತಿದೆ. ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ. ಇಂತಹ ವಾತಾವರಣವಿದ್ದರೆ ಯಾವ ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ. ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ:AI Deepfake video; ರಶ್ಮಿಕಾ ಮಂದನಾ ಡೀಪ್‌ಫೇಕ್ ವಿಡಿಯೋ ವೈರಲ್; ಅಮಿತಾಬ್ ಬಚ್ಚನ್ ಕಳವಳ
ಕಿಡಿಗೇಡಿಗಳಿಗೆ ಯಾವುದೇ ಲಂಗುಲಗಾಮು ಇಲ್ಲ. ಗೃಹ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಯಾವ ಯಾವ ಭಾಗದಲ್ಲಿ ಏನೇನು ನಡೆಯುತ್ತದೆಂದು ಪೊಲೀಸ್ ಇಲಾಖೆಗೆ ಮಾಹಿತಿ ಇರುತ್ತದೆ. ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣವಿಲ್ಲ. ವರ್ಗಾವಣೆ ಮಾಡಿ ಹಣವಸೂಲಿ ಮಾಡುತ್ತಾ ನಿಂತಿದ್ದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಹೇಗೆ? ಸರ್ಕಾರದ ನಡೆಯಿಂದಲೇ ಇಂತಹ ಘಟನೆಗಳು ಜರಗುತ್ತಿದೆ ಎಂದು ಎಚ್ ಡಿಕೆ ಟೀಕೆ ಮಾಡಿದರು.
ರಾಜ್ಯದ ಶಾಸಕರು, ಸಚಿವರು ತೆಲಂಗಾಣ ಚುನಾವಣೆಗೆ ಹೋಗುತ್ತಿರುವ ವಿಚಾರಕ್ಕೆ ಸರ್ಕಾರದ ವಿರುದ್ಧ ಕಿಡಿಕಾರಿದ ಎಚ್ ಡಿಕೆ, ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಜೆಡಿಎಸ್- ಬಿಜೆಪಿಯವರನ್ನು ಕಾಂಗ್ರೆಸ್ ಗೆ ಕರೆತರುವ ಬಗ್ಗೆ ಚರ್ಚೆಯಾಗಿದೆ. ಅವರಿಗೆ ನಾಡಿನ ಜನತೆ ಬಗ್ಗೆ ಚರ್ಚೆ ಮಾಡುವುದಕ್ಕೆ ಮೀಟಿಂಗ್ ಮಾಡಿಲ್ಲ. ಕೇವಲ ರಾಜಕೀಯಕ್ಕೆ ಮೀಟಿಂಗ್ ಮಾಡಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲಲು ಮೀಟಿಂಗ್ ಮಾಡಿದ್ದಾರೆ. ಅವರಿಗೆ ರೈತರ ಸಮಸ್ಯೆಗಳು ಬೇಕಿಲ್ಲ ಎಂದರು.