ಕನ್ನಡದ ನಟಿಯರು ಈಗ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಅಲ್ಲಿನ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗುವ ಮೂಲಕ ಬಿಝಿಯಾಗುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಸೇರಿದಂತೆ ಅನೇಕ ನಟಿಯರು ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಆಶಿಕಾ ರಂಗನಾಥ್.
ಈಗಾಗಲೇ ಆಶಿಕಾ ನಾಯಕಿಯಾಗಿ ನಟಿಸಿರುವ “ಆಮಿಗೋಸ್’ ಬಿಡುಗಡೆಯಾಗಿದೆ. ಆಶಿಕಾ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಆಶಿಕಾ ಅಭಿಮಾನಿಗಳಿಗೆ ಸಂದೇಹವೊಂದು ಕಾಡಿದೆ. ಅದು ಕನ್ನಡ ಭಾಷೆಯನ್ನು ಮರೆಯುತ್ತಾರಾ ಎಂದು. ಇತ್ತೀಚೆಗೆ ಆಶಿಕಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ವೇಳೆ ಅಭಿಮಾನಿಯೊಬ್ಬರು, “ಮುಂದೆ ಕನ್ನಡ ಮರೆಯುತ್ತೀರಾ?’ ಎಂಬ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ:ಸುನಿಲ್ ಕುಮಾರ್ ವಿರುದ್ಧ ಸ್ಪರ್ಧೆಗೆ ಬಿಜೆಪಿ ಸಚಿವರಿಂದಲೇ ಸಹಕಾರ: ಪ್ರಮೋದ್ ಮುತಾಲಿಕ್
ಈ ಪ್ರಶ್ನೆಗೆ ಉತ್ತರಿಸಿದ ಆಶಿಕಾ, ತೆಲುಗಿನಲ್ಲಿ ಎಷ್ಟೇ ಬಿಝಿಯಾದರೂ ಕನ್ನಡ ಭಾಷೆಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
“ಅನೇಕರ ತೆಲುಗಿಗೆ ಹೋದ ಬಳಿಕ ಕನ್ನಡ ಮರೆಯಬೇಡಿ, ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಬೇಡಿ ಅಂತ ಎಷ್ಟೋ ಜನ ಕನ್ನಡಿಗರು ನನಗೆ ಹೇಳುತ್ತಿದ್ದಾರೆ. ನೀವೆಲ್ಲರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ನನ್ನ ಮಾತೃಭಾಷೆ ಕನ್ನಡ. ನಾನು ಕನ್ನಡವನ್ನೇ ಮಾತನಾಡೋದು. ಸ್ವಂತ ಭಾಷೆಯನ್ನು ಹೇಗೆ ಮರೆಯಲು ಸಾಧ್ಯ?. ನಾನು ಹುಟ್ಟಿದಾಗಿನಿಂದ ಮಾತನಾಡಿಕೊಂಡು ಬಂದಿರೋದು ಕನ್ನಡ. ಮುಂದೆ ಮಾತನಾಡುವುದು ಕೂಡ ಕನ್ನಡವನ್ನೇ. ಕೆಲಸ ಅಂತ ಬಂದಾಗ ನಾವು ಎಲ್ಲಿ ಇರುತ್ತೇವೋ ಅಲ್ಲಿನ ಭಾಷೆ ಕಲಿಯಬೇಕು. ನಟ-ನಟಿಯರ ಬಗ್ಗೆ ನಮ್ಮ ಕನ್ನಡಿಗರು ಸ್ವಲ್ಪ ಜಾಸ್ತಿಯೇ ಪೊಸೆಸಿವ್ ಅಂತ ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಿ ನಿಮ್ಮೆಲ್ಲರಿಗೆ ಹೆಮ್ಮೆ ಆಗುವಂತೆ ಮಾಡುತ್ತೇನೆ’ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ