ಬೆಂಗಳೂರು: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲ್ಲ, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜನ ನನ್ನನ್ನು ಸೋಲಿಸಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಈ ಮಾತಿಗೆ ಬಿಜೆಪಿ ವ್ಯಂಗ್ಯವಾಡಿದೆ. ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸ್ಪರ್ಧಿಸಿ ಗೆಲ್ಲಲು ಸೂಕ್ತ ಕ್ಷೇತ್ರವಿಲ್ಲದ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ! ಅಂಗಳ ಅಳೆಯಲು ಸಾಧ್ಯವಿಲ್ಲದ ವ್ಯಕ್ತಿಯಿಂದ ಆಕಾಶ ಅಳೆಸಲು ಹೊರಟಿರುವುದು ಹಾಸ್ಯಾಸ್ಪದವಲ್ಲವೇ ಎಂದಿದೆ.
ಅಮೃತ ಮಹೋತ್ಸವ ಆಚರಣೆಗೆ ಹೊಸ ರೇಷ್ಮೆ ಪಂಚೆ ಖರೀದಿಸಿರುವ ಸಿದ್ದರಾಮಯ್ಯ ತುರ್ತಾಗಿ ಒಂದು ದಶಮಾನೋತ್ಸವ ಆಚರಣೆ ಮಾಡಬೇಕು. ಏಕೆಂದರೆ, ಇದೇ ನನ್ನ ಕೊನೆ ಚುನಾವಣೆ ಎಂದು ಘೋಷಿಸಿ ದಶಕದ ಕಾಲವಾಗಿದೆ. ಘೋಷಣೆಗಳು ಮಾತ್ರ ನಿರಂತರವಾಗಿದೆ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ: ಕೇರಳದಲ್ಲಿ ಮತ ಹಾಕಿದ ಯುಪಿ ಬಿಜೆಪಿ ಶಾಸಕ
ಇದೇ ನನ್ನ ಕೊನೆಯ ಚುನಾವಣೆ ಎಂದು ಸಿಎಂ ಕುರ್ಚಿ ಮೇಲೆ ಟವೆಲ್ ಎಸೆದಿರುವ ಸಿದ್ದರಾಮಯ್ಯ ಒಂದು ಕಡೆಯಾದರೆ, ಸಿಎಂ ಆಗಲು ಕಾಲ ಕೂಡಿ ಬಂದಿದೆ ಎನ್ನುವ ಡಿಕೆ ಶಿವಕುಮಾರ್ ಇನ್ನೊಂದು ಕಡೆ. ಈ ನಡುವೆ ಸತೀಶ್ ಜಾರಕಿಹೊಳಿ ಕೂಡಾ ಸಿಎಂ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಈಗ ಒಡೆದ ಮನೆ ಎಂದ ಬಿಜೆಪಿ ಟ್ವೀಟ್ ಮಾಡಿದೆ.