Advertisement

ಹೈಕಮಾಂಡ್‌ ಡಿಸಿಎಂ ಹುದ್ದೆ ನೀಡಿದರೆ ನಿರ್ವಹಿಸುತ್ತೇನೆ: ಶ್ರೀರಾಮುಲು

10:08 AM Dec 16, 2019 | sudhir |

ಬೆಂಗಳೂರು: ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಜನರ ಬೇಡಿಕೆಯೇ ಹೊರತು ನಾನು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರಿಗೆ ತಾನೆ ಆಸೆ ಇರೋಲ್ಲ.

Advertisement

ಹೈಕಮಾಂಡ್‌ ಡಿಸಿಎಂ ಹುದ್ದೆ ನೀಡಿದರೆ ನಿರ್ವಹಿಸಲು ಸಿದ್ಧ. ಆದರೆ ಪಕ್ಷಕ್ಕೆ ಮುಜುಗರವಾಗುವುದಾದರೆ ಬೇಡ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಸ್ಥಾನ ನೀಡಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದರೂ ಮೌನ ವಹಿಸಿದ್ದ ಶ್ರೀರಾಮುಲು ಅವರು ಶನಿವಾರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ಯಾವುದೇ ಬೇಸರವಿಲ್ಲ. ವೈಯಕ್ತಿಕ ಕೆಲಸದ ಕಾರಣಕ್ಕೆ ಮುಖ್ಯಮಂತ್ರಿಗಳ ಅನುಮತಿ ಪಡೆದು ಸಂಪುಟ ಸಭೆಗೆ ಗೈರಾಗಿದ್ದೆ. ಆದರೆ ಅದು ದೊಡ್ಡ ಸುದ್ದಿಯಾಗಿದೆ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ರಮೇಶ್‌ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ನನ್ನನ್ನೇ ಪರಿಗಣಿಸಬೇಕೆಂದೇನೂ ಇಲ್ಲ. ನಾನೂ ಪಕ್ಷಕ್ಕಾಗಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ ಎಂದರು.

ಈಗಾಗಲೇ ಸೃಷ್ಟಿಸಿರುವ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಪಡಿಸುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಈ ಕುರಿತು ಹೈಕಮಾಂಡ್‌ ನಿರ್ಧರಿಸಲಿದೆ ಎಂದಷ್ಟೇ ಹೇಳಿದರು.

Advertisement

ಡಿಸಿಎಂ ಸ್ಥಾನ ನೀಡಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಯಾರಿಗೆ ತಾನೆ ಆಸೆ ಇರೊಲ್ಲ ಹೇಳಿ. ಪಕ್ಷದ ಹೈಕಮಾಂಡ್‌ ಡಿಸಿಎಂ ಸ್ಥಾನ ನೀಡಿದರೆ ನಾನು ನಿರ್ವಹಿಸಲು ಸಿದ್ಧ. ಆದರೆ ಪಕ್ಷಕ್ಕೆ ಮುಜುಗರ ಆಗುವುದಾದರೆ ಬೇಡ. ನಾನು ಎಂದೂ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಂಡ ಮನುಷ್ಯನಲ್ಲ ಎಂದು ತಿಳಿಸಿದರು.

ನನಗೂ ಮೊದಲೇ ಸಿಗಬೇಕಿತ್ತು
ಇನ್ನೊಂದೆಡೆ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಿರಿತನ ಆಧರಿಸಿ ನನಗೆ ಮೊದಲ ಸಂಪುಟ ವಿಸ್ತರಣೆಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶ್ರೀರಾಮುಲು ಅವರಿಗಿಂತ ಪಕ್ಷದಲ್ಲಿ ಹಿರಿಯನಾಗಿದ್ದು, ಮೊದಲ ಕಂತಿನಲ್ಲೇ ಸಚಿವನಾಗಬೇಕಿತ್ತು. ಆದರೆ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ಶ್ರೀರಾಮುಲು ನಮ್ಮ ಪಕ್ಷ ಪ್ರಮುಖ ನಾಯಕರು. ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಬಂದಿದೆ. ಶ್ರೀರಾಮುಲು ಅವರ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. 17 ಮಂದಿ ನಮಗಾಗಿ ರಾಜೀನಾಮೆ ನೀಡಿ ಬಂದಿದ್ದಾರೆ.

ಮೊದಲಿಗೆ ಅವರು ನಮಗೆ ಮುಖ್ಯ. ಇನ್ನೂ ಮೂರೂವರೆ ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರಲಿದ್ದಾರೆ. ಪಕ್ಷದಲ್ಲಿ ಮೂಲ ಬಿಜೆಪಿಗರ ಅಸಮಾಧಾನ ಎಂಬುದಾಗಿ ಏನೂ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next