Advertisement

ಬೆಂಗಳೂರಿನಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ ಎನ್ನುವವರಿಗೆ 2023ರಲ್ಲಿ ಉತ್ತರ ಕೊಡುವೆ

10:54 PM Jul 10, 2022 | Team Udayavani |

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ನಾನು ಯಾವುದೇ ಲೂಟಿ ಹೊಡೆಯುವ ಸಂಸ್ಥೆಗಳನ್ನು ನಡೆಸುತ್ತಿಲ್ಲ. ಅಲ್ಲದೆ, ಜೆಡಿಎಸ್‌ ಪಕ್ಷಕ್ಕೆ ಬೆಂಗಳೂರಿನಲ್ಲಿ ನೆಲೆಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಪಕ್ಷಕ್ಕೆ ನಗರದಲ್ಲಿ ನೆಲೆ ಇದೆಯೋ ಇಲ್ಲವೋ ಎಂಬುದನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೋರಿಸುತ್ತೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಗುಡುಗಿದರು.

Advertisement

ಅವರು ಭಾನುವಾರ ದಾಸರಹಳ್ಳಿಯ ಅಬ್ಬಿಗೆರೆ ಹಾಗೂ ಹೊಸಕೆರೆಹಳ್ಳಿಯಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಡವರನ್ನು ಹಿಂಸೆ ಮಾಡುವ ಕೆಲಸ ನಡೆದರೆ ಶ್ರೀಲಂಕಾದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತದೆ. ಇನ್ನೊಂದು ಶ್ರೀಲಂಕಾ ಸೃಷ್ಟಿ ಮಾಡುವ ಪಕ್ಷಗಳು ನಿಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು.

ಮೋದಿ ಶ್ರೀಮಂತರ ಪರ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಬೇಡಿ. ನರೇಂದ್ರ ಮೋದಿ ಮಾತಿಗೆ ನೀವು ಮರುಳಾಗಬೇಡಿ. ಮೋದಿ ಹಾಗೂ ಬಿಜೆಪಿ ಪಕ್ಷ ಇರುವುದೇ ಶ್ರೀಮಂತರಿಗಾಗಿ, ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟು ಮತ ಪಡೆಯಲು ಬರುತ್ತಾರೆ. ನಿಮ್ಮ ದುಡ್ಡನ್ನು ಲೂಟಿ ಮಾಡಿ ಮಜಾ ಮಾಡುತ್ತಿದ್ದಾರೆ. ಅವರು ಶ್ರೀಮಂತರ ಪರವಾಗಿದ್ದಾರೆ. ಬಡವರ ಪರ ಇಲ್ಲ ಎಂದು ಟೀಕಿಸಿದರು.

ರಾಜ್ಯ ಸರಕಾರದಿಂದ ತಾರತಮ್ಯ:
ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿ ಸರಕಾರವೇ ಇಂಥ ತಪ್ಪು ಮಾಡುತ್ತಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ 750 ಕೋಟಿ ಹಣವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿಲ್ಲಿಸಿದೆ. ನಿಮಗೆ ದ್ರೋಹ ಮಾಡುವ ಪಕ್ಷಗಳ ಮೊದಲ ಸ್ಥಾನದಲ್ಲಿ ಬಿಜೆಪಿ ಇದೆ. ವಿದ್ಯುತ್‌, ಅನಿಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆ. ಮಹಾನಗರದಲ್ಲಿ ಮಾಡಬೇಕಾದ ಕೆಲಸಗಳ ಮಾಹಿತಿ ಪಡೆಯಲು ಈ ಜನತಾಮಿತ್ರ ವಾಹನ ನಿಮ್ಮ ಮನೆ ಮುಂದೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇಂಗ್ಲಿಷ್‌ ಮೀಡಿಯಂ ವಿದ್ಯಾಭ್ಯಾಸಕ್ಕೆ ಹಣ ನೀಡದೆ ಮಕ್ಕಳು ಉಚಿತವಾಗಿ ಕಲಿಯುವ ವ್ಯವಸ್ಥೆ ಮಾಡುತ್ತೇವೆ. ಆರೋಗ್ಯಮಿತ್ರ ಅಡಿಯಲ್ಲಿ ಉಚಿತ ಆರೋಗ್ಯ ಒದಗಿಸುತ್ತೇವೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಲು ಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನೂ ಒದಗಿಸುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.

Advertisement

ಉಚಿತ ವಿದ್ಯುತ್‌: ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ಛಕ್ತಿ ಕೊಡಲು ಚಿಂತನೆ ಮಾಡಲಾಗಿದೆ. ಲೂಟಿ ಆಗುತ್ತಿರುವ ನಿಮ್ಮ ಹಣ ನಿಮಗೇ ತಲುಪಬೇಕು. ನಿಮ್ಮ ಕಷ್ಟಗಳು ಏನೇ ಇದ್ದರೂ ಜನತಾ ಮಿತ್ರ ವಾಹನದ ಬಾಕ್ಸ್‌ನಲ್ಲಿ ಹಾಕಿ, ಯಾವ ರೀತಿಯ ಯೋಜನೆ ಬೇಕು ಅದನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಬೆಂಗಳೂರು ನಗರ ಜೆಡಿಎಸ್‌ ಅಧ್ಯಕ್ಷ ಪ್ರಕಾಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next