ಬೆಂಗಳೂರು: “ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ನಿಮ್ಮ ಸೇವೆಯನ್ನು ಮಾಡಿಕೊಂಡು ಹೋಗುತ್ತೇನೆ. ಆದರೆ, ವರಿಷ್ಠರ ತೀರ್ಮಾನವೇ ಅಂತಿಮ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೆ” ಇದು ಶಿವಗಂಗೆ ಮೇಲಣಗವಿ ಮಠದ ಶ್ರೀ ಮಲಯಾ ಶಾಂತಮುನಿ ಶಿವಾಚಾರ್ಯ ಅವರು ಭೇಟಿಯಾದಾಗ ಸಿಎಂ ಯಡಿಯೂರಪ್ಪ ಹೇಳಿರುವ ಮಾತುಗಳು.
ರಾಜ್ಯಕ್ಕೆ ನಿಮ್ಮ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಸ್ವಾಮಿಗಳು ಹೇಳಿದರು.
ನಾವು ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿಗೂ ಸಿದ್ಧ. ಸ್ವಾಮೀಜಿಗಳೆಲ್ಲ ಸೇರಿ ದೆಹಲಿಗೆ ಹೋಗುವುದಕ್ಕೂ ಸಿದ್ಧ. ಯಡಿಯೂರಪ್ಪ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಅವರಿಗೆ ಅಧಿಕಾರ ಬೇಡವಾಗಿರಬಹುದು. ಆದರೆ ಈ ರಾಜ್ಯಕ್ಕೆ ಅವರ ಆಡಳಿತದ ಅಗತ್ಯವಿದೆ ಎಂದು ಸ್ವಾಮೀಜಿಗಳು ಸಿಎಂ ಬಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕೇಂದ್ರ ಹೇಳಿದಂತೆ ಕೇಳುತ್ತೇನೆ, ಶ್ರೀಗಳು ಸಹಕಾರ ನೀಡಬೇಕು: ರಾಜೀನಾಮೆ ಸುಳಿವು ನೀಡಿದ BSY
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಗಂಗೆ ಶ್ರೀಗಳು, ಯಡಿಯೂರಪ್ಪ ಬದಲಾವಣೆ ಆತಂಕಕಾರಿ ವಿಚಾರ. ನಮ್ಮ ಸಮುದಾಯಕ್ಕೆ ಆತಂಕಕಾರಿ ವಿಚಾರ. ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸಿದ್ದಾರೆ. ಯಡಿಯೂರಪ್ಪನವರ ಜನಪರ ಕಾಳಜಿಯುತ ಆಡಳಿತ ರಾಜ್ಯಕ್ಕೆ ಅಗತ್ಯ. ಯಡಿಯೂರಪ್ಪರ ಜನಪ್ರಿಯತೆಯಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ದಕ್ಷಿಣ ಭಾರತದಲ್ಲಿ ಯಡಿಯೂರಪ್ಪರಿಂದ ಪಕ್ಷಕ್ಕೆ ನೆಲೆ ಸಿಕ್ಕಿದೆ. ಯಡಿಯೂರಪ್ಪರನ್ನು ಗೌರವಪೂರ್ಣವಾಗಿ ಹೈಕಮಾಂಡ್ ನಡೆಸಿಕೊಳ್ಳಲಿ ಎಂದರು.
ಅವರನ್ನು ಅವಧಿಪೂರ್ಣ ಅಧಿಕಾರ ಮಾಡಲು ಬಿಡುವುದೇ ಗೌರವಪೂರ್ಣವಾಗಿ ನಡೆಸಿಕೊಂಡಂತೆ. ಯಡಿಯೂರಪ್ಪರನ್ನು ಬದಲಾವಣೆ ಮಾಡಿದರೆ ರಾಜ್ಯದ ಜನಕ್ಕೆ ಅಪಚಾರ ಮಾಡಿದಂತೆ ಎಂದು ಶ್ರೀಗಳು ಹೇಳಿದರು.