Advertisement

ಈಗ ಬರುವೆನೆಂದು ಹೇಳಿ ಇದ್ದಕ್ಕಿದ್ದಂತೆ ಮರೆಯಾದ ಜೀವವೇ…

06:00 AM Aug 31, 2018 | |

ಬಾಲ್ಯ ಎಂದರೆ ಎಷ್ಟು ಚೆಂದ ಅಲ್ವ . ಮುಗ್ಧತೆ, ತರಲೆ, ತುಂಟತನ ಹುಡುಗಾಟಿಕೆಯ ವಯಸ್ಸು ಅದು. ಬಾಲ್ಯ ಎಂದಾಕ್ಷಣ, ಮೊದಲಿಗೆ ನೆನಪು ಬರುವುದೇ  ಶಾಲೆ. ಶಾಲೆಯ ದಿನಗಳೇ ಹಾಗೆ. ಮನಸ್ಸಿಗೆ ಖುಷಿ, ನೆಮ್ಮದಿ  ಕೊಡುತ್ತದೆ, ಎನ್ನುವುದಕ್ಕಿಂತ ಜೀವನಕ್ಕೆ ಬೇಕಾದಂತಹ ಹಲವು ವಿಷಯಗಳನ್ನು ಕಲಿಸುತ್ತದೆ. 

Advertisement

ನಾನು ಶಾಲೆಗೆ ಹೋಗಲು ಎಂದಿಗೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ,  ದಿನಾಲೂ ನಮಗೆ ಪಾಠದ ಅವಧಿಯ ಜೊತೆಗೆ ಆಟದ ಪೀರಿಯಡ್‌ ಕೂಡ ಇರುತ್ತಿದ್ದವು. ಹಾಗಾಗಿ ನನಗೆ ಶಾಲೆಗೆ ಹೋಗಲು ಯಾವುದೇ ತಕರಾರು ಇರಲಿಲ್ಲ. ನಾನು, ಬಹಳ ಶಿಸ್ತಿನಿಂದ ಪಾಠ ಕೇಳುತ್ತಿದ್ದೆ. ಮೊದಲಿನಿಂದಲೂ ಕನ್ನಡ ಅವಧಿ ಎಂದರೆ, ನನಗೆ ಬಹಳಷ್ಟು ಇಷ್ಟ . ಯಾಕೆ‌ಂದರೆ, ಅದೊಂದೇ ಅವಧಿಯಲ್ಲಿ ಇಂಗ್ಲೀಷ್‌ ಭಾಷೆಯ ಬಳಕೆ ಇರುತ್ತಿರಲಿಲ್ಲ. ನಾನು ಐದನೆಯ ತರಗತಿಯಿಂದ ಎಂಟನೆಯ ತರಗತಿ ಓದುವವರೆಗೆ ನನಗೆ ಕನ್ನಡಕ್ಕಾಗಿ ಬರುತ್ತಿದ್ದ ಶಿಕ್ಷಕಿ ಮೀರಾ ಮೇಡಮ್‌. ಆಕೆ ಎಂದರೆ ಎಲ್ಲರಿಗೂ ಹೆದರಿಕೆ, ಅವರು ಬರುತ್ತಿದ್ದಂತೆಯೇ  ನಾವೆಲ್ಲರೂ ಒಂದು ಸೂಜಿ ಬಿದ್ದರೂ ಶಬ್ದ ಕೇಳುವಷ್ಟು ಮೌನವಾಗಿ ಕೂತುಬಿಡುತ್ತಿದ್ದೆವು. ಮೀರಾ ಮೇಡಮ್‌ ಎಷ್ಟೇ ಸ್ಟ್ರಿಕ್ಟ್ ಇದ್ದರೂ, ಆಕೆ ಸಹೃದಯಿ, ತಾಯಿಯಂತೆ ಮಮತೆ ತೋರುತ್ತಿದ್ದರು. ನಮ್ಮೆಲ್ಲರನ್ನು  ಆಕೆಯ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಪಾಠ, ಓದು ಮತ್ತು ಶಿಸ್ತು- ಈ ಮೂರು ವಿಷಯದ ಜೊತೆಗೆ ಮಕ್ಕಳ ಇತರ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ಮೀರಾ‌ ಮೇಡಮ್‌ ಎಂದ ಕೂಡಲೇ ನೆನಪಿಗೆ ಬರುವುದೇ, ಅವರ ಗಟ್ಟಿ ಧ್ವನಿ, ಜೊತೆಗೆ ಅವರಿಗಿದ್ದ  ಮಾರುದ್ದ ಕೂದಲು. ನಾವೆಲ್ಲರೂ ಮೇಡಮ್‌ ಕೂದಲನ್ನು ಅವರಿಗೆ ಗೊತ್ತಾಗದ‌ಂತೆ ಮುಟ್ಟುತ್ತಿದ್ದೆವು. ಅವರನ್ನು ಮಾತಾಡಿಸಲು ಒಂದಲ್ಲ ಒಂದು ಕಾರಣ ಹುಡುಕಿಕೊಂಡು, ಅವರ ರೂಮಿಗೆ ಹೋಗುತ್ತಿದ್ದೆವು.

ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಐದನೆಯ ತರಗತಿಯಿಂದ ಮೂರು ವರ್ಷ ಸತತವಾಗಿ ಅವರೇ ನಮಗೆ ಕನ್ನಡ ಶಿಕ್ಷಕಿ. ಅಂದು ನಮ್ಮ ಎಂಟನೆಯ ತರಗತಿಯ ಮೊದಲನೆಯ ದಿನ ಅವರು ಪಾಠ ಮಾಡಲು ಬಂದಿದ್ದರು, ಆದರೆ, ಯಾವುದೂ ಮೊದಲಿನಂತಿರಲಿಲ್ಲ. ರಜೆ ಮುಗಿಸಿ ಹೈಸ್ಕೂಲ್‌ ಮೆಟ್ಟಿಲೇರಿದ್ದ ನಮಗೆ, ಗೊಂದಲಮಯವಾದ ಬದಲಾವಣೆ.  ನಮಗ್ಯಾರಿಗೂ ಊಹಿಸಲೂ ಸಾಧ್ಯವಾಗದಂತಹ ಬದಲಾವಣೆ ಆಗಿಹೋಗಿತ್ತು.  ಅವರ ಆ ಗಟ್ಟಿ ದನಿ ತಗ್ಗಿತ್ತು, ಕೂದಲು ಭುಜಕ್ಕೆ ತಾಕುವಷ್ಟು ಚಿಕ್ಕದಾಗಿತ್ತು. ಎಲ್ಲರಲ್ಲೂ ಒಂದೇ ಪ್ರಶ್ನೆ- ಮೀರಾ ಮೇಡಮ್‌ಗೆ ಏನಾಗಿದೆ? ಒಮ್ಮೆಲೇ ಹತ್ತು ದಿನ ಶಾಲೆಗೆ ರಜೆ ಹಾಕಿಬಿಡುತ್ತಿದ್ದರು. ಯಾಕೆ? ಎನ್ನುವುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ನಾವೆಲ್ಲರೂ ಒಂದು ಗುಂಪಾಗಿ ಹೋಗಿ ಕೇಳಿದೆವು, ಆಗ ಅವರು ಒಂದೇ ವಾಕ್ಯದಲ್ಲಿ, “ನನಗೆ ಆರೋಗ್ಯ ಸರಿ ಇಲ್ಲ ಮಕ್ಕಳೇ’ ಎಂದಿದ್ದರು. 

ದಿನಗಳು ಉರುಳಿದಂತೆ‌ಯೇ ಮ್ಯಾಮ್‌ ಶಾಲೆಗೆ ಬೇಗ ಬರುತ್ತಿದ್ದರು. ಇಷ್ಟು ದಿನಗಳು ಬೇಗ ಬಾರದವರು ಒಮ್ಮೆಲೇ ಹೀಗೆ ದಿನಾಲೂ ಬೇಗ ಬರುತ್ತಿದ್ದಾರೆ. ಯಾಕೆಂದು ಕೇಳಿದಾಗ, “ಆಸ್ಪತ್ರೆಯಿಂದ ನೇರವಾಗಿ ಬಂದು ಬಿಟ್ಟೆ, ಸ್ವಲ್ಪ ಸುಧಾರಿಸಿಕೊಳ್ಳಲು ಸಮಯ ಸಿಕ್ಕಂತಾಗುತ್ತದೆ’ ಎನ್ನುತ್ತಿದ್ದರು. “ದೇವರೆ ಅದೇನಾಗುತ್ತಿದೆ’ ಎಂದು ಎಲ್ಲರೂ ತಲೆಮೇಲೆ ಕೈ ಹೊತ್ತು ಕೂತು ಬಿಟ್ಟೆವು. ಒಂದು ದಿನ  ತರಗತಿಗೆ ಮೀರಾ ಮ್ಯಾಮ್‌ ಬಂದು, “ಮಕ್ಕಳೇ ನಾನು ಹದಿನೈದು ದಿನ ರಜೆಯಲ್ಲಿದ್ದೇನೆ, ಹಾಗಾಗಿ, ನಿಮ್ಮ ತರಗತಿಯನ್ನು ಯಾವ ಶಿಕ್ಷಕಿ ತಗೆದುಕೊಳ್ಳುತ್ತಾರೆ ಅವರಿಗೆ ಸಹಕರಿಸಿ, ನಾನು ಬೇಗ ಬರುತ್ತೇನೆ ಮಕ್ಕಳೇ, ಚೆನ್ನಾಗಿ ಓದಿಕೊಳ್ಳಿ’ ಎಂದು ಹೇಳಿ ಹೊರಟರು. ನಾವೆಲ್ಲರೂ ರಾಮನಿಗಾಗಿ  ಶಬರಿ ಕಾದುಕುಳಿತಂತೆ ಕಾಯುತ್ತಿದ್ದೆವು. ಶಾಲೆಗೆ ಹೋಗುವ ಆಸಕ್ತಿಯನ್ನು ಎಲ್ಲರೂ ಕಳೆದುಕೊಂಡಿದ್ದರು. ಅವರನ್ನು ನೋಡಲೇಬೇಕೆಂದು ಬಹಳಷ್ಟು ಅನಿಸತೊಡಗಿತು. ಆ ಹದಿನೈದು ದಿನವನ್ನು ಹದಿನೈದು ವರ್ಷಗಳಂತೆ ಕಳೆದೆವು. ಆದರೆ, ಅವರು ಮಾತ್ರ ಬರಲೇ ಇಲ್ಲ. 

ಅಂದು ಎಂದಿನಂತೆ ಶಾಲೆಗೆ ಬಂದೆ, ಎಲ್ಲೆಡೆ ನೀರವ ಮೌನ, ಶಾಲೆಗೆ ಕಳೆಯೇ ಇಲ್ಲವಲ್ಲ ಎಂದೆನಿಸುತ್ತಿತ್ತು. ನನ್ನ ಸೈಕಲ್‌ ನಿಲ್ಲಿಸಿ, ತರಗತಿಗೆ ಹೋದಾಗ ಎಲ್ಲವೂ ಗೊಂದಲಮಯವಾಗಿ ತೋರುತ್ತಿತ್ತು, ಏನೂ ಅರ್ಥವಾಗದ ಸಂದರ್ಭ. ಎಲ್ಲರೂ ಗೋಳಾಡುತ್ತಿದ್ದರು. ಏನಾಯಿತು? ಎಂದು ಕೇಳಿದರೆ, ಯಾರೂ ಏನೂ ಹೇಳುತ್ತಿರಲಿಲ್ಲ. ತಕ್ಷಣ ನನ್ನ  ಗೆಳೆಯನೊಬ್ಬ ಬಂದು, “ಮೀರಾ ಮೇಡಮ್‌ ತೀರಿಕೊಂಡರಂತೆ’ ಎಂದು ಬಿಟ್ಟ. 

Advertisement

ಆಕಾಶವೇ ಕಳಚಿ ಬಿದ್ದ‌ಂತಾಯಿತು. ಅಬ್ಟಾ…. ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಯಾಕೆ ಹೀಗಾಯಿತು? ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಬರುತ್ತೇನೆಂದವರು ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದರು. ಎಲ್ಲರೂ ಏನೇನೋ ಕಾರಣ ನೀಡುತ್ತಿದ್ದರು. ಆದರೆ, ನನ್ನ ನೆಚ್ಚಿನ ಶಿಕ್ಷಕಿಗೆ ಇದ್ದದ್ದು ಸ್ತನದ ಕ್ಯಾನ್ಸರ್‌ ಎಂದು ಕೇಳಿ ಜೀವವೇ ಹಾರಿ ಹೋದಂತಾಗಿತ್ತು. ಅವರನ್ನು ಅಂತಿಮವಾಗಿ ನೋಡಬೇಕೆಂದು ಹಠ ಹಿಡಿದೆವು. ನೋಡಿದೆವು ಕೂಡ.

ಕಣ್ಣೀರಿಗೆ ಅಂತ್ಯವೇ ಇರಲಿಲ್ಲ. ಬದುಕಿನಲ್ಲಿ ಹೊಸ ಅನುಭವವದು. ಈಗ ಬರುವೆನೆಂದು ಹೇಳಿ ಮರೆಯಾದ ಜೀವವೇ, ನನಗೂ ನಿಮಗೂ ನೆನಪೊಂದೇ ಈಗ ಸೇತುವೆ.

ಸಂಹಿತಾ ಎಸ್‌. ಮೈಸೂರೆ
ತೃತೀಯ ಪತ್ರಿಕೋದ್ಯಮ, ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next