ಹುಣಸೂರು: ಎನ್‌ಡಿಎ ಅಭ್ಯರ್ಥಿ ಯದುವೀರ್ ಒಡೆಯರ್, ಜೆಡಿಎಸ್ ಶಾಸಕ ಜಿ.ಡಿ.ಹರೀಶ್‌ಗೌಡರೊಡಗೂಡಿ ತಾಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಗುರುವಾರ ಬೆಳಗ್ಗೆ ನಗರದ ದೇವರಾಜ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಲ್ಲಹಳ್ಳಿಯ ದೇವರಾಜ ಅರಸರ ಸಮಾಧಿಗೆ ಗೌರವ ಸಮರ್ಪಿಸಿದರು. ನಂತರ ಹನಗೋಡು ಬಳಿಯ ದೊಡ್ಡಹೆಜ್ಜೂರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದಲೇ ಮತ ಪ್ರಚಾರ ಆರಂಭಿಸಿದರು.
ನಂತರ ಹನಗೋಡಿನಲ್ಲಿ ರೋಡ್ ಶೋ ನಡೆಸಿ, ಸುಮಿತ್ರಾ ಶಿವನಂಜೇಗೌಡ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಮದ್ಯಾಹ್ನ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಧರ್ಮಾಪುರ ಜಿ.ಪಂ.ಕ್ಷೇತ್ರದ ಹಾಗೂ ಸಂಜೆ ಬಿಳಿಕೆರೆ ಜಿ.ಪಂ.ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ಹಾಗೂ ರೋಡ್ ಶೋ ನಡೆಸಿ, ಪ್ರಚಾರ ಭಾಷಣ ಮಾಡಿದರು. ಎಲ್ಲಡೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ವಿಕಸಿತ ಭಾರತ ನಿರ್ಮಾಣಕ್ಕೆ ಬೆಂಬಲಿಸಿ:
ವಿವಿಧೆಡೆ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಯದುವೀರ್, ನಮ್ಮ ಪೂರ್ವಜನರು ಈ ನಾಡಿನ ಜನರ ಶ್ರೇಯೋಭಿವೃದ್ದಿಗಾಗಿ ಅನೇಕ ಕೊಡುಗೆಗಳನ್ನು ನೀಡಿರುವ ಬಗ್ಗೆ ಜನರಲ್ಲಿ ಕೃತಜ್ಞತಾ ಭಾವವಿದೆ. ತಾವು ಕೂಡ ಜನಸೇವೆ ಮಾಡಲು ಉತ್ಸುಕನಾಗಿದ್ದು, ದೇಶದ ಅಭಿವೃದ್ದಿ ಮತ್ತು ಜನರ ರಕ್ಷಣೆಗೆ ಸದಾ ಮಿಡಿಯುವ ಪ್ರಧಾನಿ ಮೋದಿ ಪ್ರಭಾವದಿಂದ ಸ್ಪರ್ಧಿಸಿದ್ದೇನೆ. ಅವರ 10 ವರ್ಷಗಳ ಅಭಿವೃದ್ದಿಯನ್ನು ಟ್ರೇಲರ್ ಎಂದಿದ್ದಾರೆ. ಹೆದ್ದಾರಿಗಳ ಅಭಿವೃದ್ದಿ, ಮೆಟ್ರೋಗಳ ವಿಸ್ತರಣೆ ಸೇರಿದಂತೆ ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಠಿ ಹತ್ತು ಹಲವು ಅಭಿವೃದ್ದಿಗಳ ಮಾಡಿ ತೋರಿಸಿದ್ದಾರೆ. ಮುಂದೆ ಶ್ರೇಷ್ಟ ಭಾರತ ನಿರ್ಮಾಣಕ್ಕಾಗಿ ದೂರ ದೃಷ್ಟಿಯ ಕಲ್ಪನೆಯನ್ನು ಹೊತ್ತಿರುವ ಮೋದಿಯವರಿಗೆ ಶಕ್ತಿ ತುಂಬುವ ಸಲುವಾಗಿ, ತಮಗೆ ಮತ ನೀಡಿ ಚುನಾಯಿಸುವಂತೆ ಮನವಿ ಮಾಡಿ, ಈ ಬಾಗದ ತಂಬಾಕು ಸಮಸ್ಯೆ ಸೇರಿದಂತೆ ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸುವೆನೆಂದು ತಿಳಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಈ ನಾಡಿಗೆ ಅನೇಕ ಕೊಡುಗೆ ನೀಡಿರುವ ಮೈಸೂರು ಮಹಾರಾಜರ ವಂಶಸ್ಥ ಯದುವೀರ್ ಸಮರ್ಥ ಅಭ್ಯರ್ಥಿಯಾಗಿದ್ದು, ಇವರನ್ನು ಗೆಲ್ಲಿಸುವ ಮೂಲಕ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಮತ ನೀಡಿರೆಂದ ಅವರು, ಮೈಸೂರು ರಾಜರ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಮೀಸಲಾತಿ, ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಬೆಂಬಲಿಸುವಂತೆ ಕೋರಿ, ಕಾಂಗ್ರೆಸ್ ಸುಳ್ಳು, ಅಸೂಯೆ, ದ್ವೇಶವೇ ಭಾವನೆಯ ಪಕ್ಷವಾಗಿದೆ. ಸಿದ್ದರಾಮಯ್ಯರ ಅವಧಿಯ ಚಾಮುಂಡೇಶ್ವರಿ ಕ್ಷೇತ್ರ, ಇಂದಿನ ಚಾಮುಂಡೇಶ್ವರಿ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಿದೆ. ಇವರ ಬಗ್ಗೆ ಮಾತನಾಡುವುದೇ ಇಲ್ಲ. ಅಂಥವನು ನಾನಲ್ಲವೆಂದು ದೂರಿದ ಅವರು, ಹುಣಸೂರು ತಾಲೂಕಿನಲ್ಲಿ ಕನಿಷ್ಟ 25 ಸಾವಿರ ಬಹುಮತ ಬರುವಂತೆ ಕಾರ್ಯಕರ್ತರು ಶ್ರಮ ಹಾಕಬೇಕೆಂದು ಮನವಿ ಮಾಡಿದರು.
ತಾಲೂಕಿನ ಕಲ್ಲಹಳ್ಳಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಹರೀಶ್‌ಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಸಿ ಬ್ಯಾಂಕ್‌ಗೆ ಆಯ್ಕೆಯಾಗದಂತೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಚುನಾವಣೆಯಾಗದಂತೆ ತಡೆದುದಲ್ಲದೆ, ಆಯಕಟ್ಟಿನ ಸ್ಥಳಗಳಿಗೆ ಬ್ರಷ್ಟಾಚಾರದ ಆರೋಪ ಹೊತ್ತಿರುವವರ, ದುಡ್ಡು ಹೊಡೆದಿರುವ ಕಳ್ಳಕಾಕರನ್ನು ನೇಮಿಸಿದ್ದಾರೆಂದು ಆರೋಪಿಸಿ, ತಮ್ಮ ಅವಧಿಯಲ್ಲಿ ಡಿಸಿಸಿ ಬ್ಯಾಂಕ್‌ನ್ನು ಅಭಿವೃದ್ದಿ ಪಡಿಸಿದ್ದೆ. ಇನ್ನು ಸಹಿಸದೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆಂದು ಭ್ರಷ್ಟಾಚಾರ ಹೊತ್ತಿರುವ ಅಧಿಕಾರಿಗಳಿಗೆ ಸಹಕಾರ ಕೊಡುವುದು ನಿಲ್ಲಿಸಿರೆಂದು ಆಗ್ರಹಿಸಿದರು.
ತಮ್ಮ ಮೇಲೆ ಈ ಹಿಂದೆ ಹುಣಸೂರಲ್ಲೇ ಅಟ್ರಾಸಿಟಿ ಪ್ರಕರಣ ದಾಖಲಿಸಿ, ಕಿರುಕುಳ ನೀಡಿದ್ದರೂ ನಾನೇನು ದ್ವೇಶ ರಾಜಕಾರಣ ಮಾಡುತ್ತಿಲ್ಲ. ಅದೆಲ್ಲ ಮರೆತಿದ್ದೇನೆ, ಮುಂಬರುವ ಚುನಾವಣೆಯಲ್ಲಿ ಜನತೆ ಎಲ್ಲವನ್ನು ತೀರ್ಮಾನಿಸಲಿದ್ದಾರೆಂದು ವಿರೋಧಿಗಳಿಗೆ ಠಾಂಗ್ ನೀಡಿದರು.
ದೇವರಾಜ ಅರಸರ ಮೊಮ್ಮಗ ಮಂಜುನಾಥ ಅರಸ್ ಮಾತನಾಡಿ, ನಮ್ಮ ತಾತ, ತಾಯಿ ಚಂದ್ರಪ್ರಭ ಅರಸರಿಗೆ ನೀಡಿದಂತೆ ಯದುವೀರರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಎಲ್ಲೆಡೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಗಣೇಶ್ ಕುಮಾರ ಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ನಗರಸಭೆ ಸದಸ್ಯರಾದ ವಿವೇಕಾನಂದ, ಕೃಷ್ಣರಾಜಗುಪ್ತ, ರಾಣಿ ಪೆರುಮಾಳ್, ಹರೀಶ್, ಎರಡೂ ಪಕ್ಷಗಳ ಮುಖಂಡರಾದ ಹೇಮಂತ ಕುಮಾರ್, ಕೌಲನಹಳ್ಳಿ ಸೋಮಶೇಖರ್, ಮಿರ್ಲೆ ಶ್ರೀನಿವಾಸಗೌಡ, ನಾಗಣ್ಣಗೌಡ, ನಾರಾಯಣ್, ಕಿರಂಗೂರು ಬಸವರಾಜು, ಹರವೆ ಶ್ರೀಧರ್, ಹನಗೋಡು ಮಂಜುನಾಥ್, ದೇವರಹಳ್ಳಿ ಸೋಮಶೇಖರ್, ಅರುಣ್ ಚವಾಣ್, ಚಂದ್ರಶೇಖರ್, ಸವಿತಾ ಚವಾಣ್, ನಾಗರಾಜ ಮಲ್ಲಾಡಿ, ಶ್ರೀನಿವಾಸ್, ಗೋವಿಂದೇಗೌಡ, ಸುಭಾಷ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.